ಹಿರಿಯ ಅಧಿಕಾರಿಯಾಗಿರೋ ಮಗಳಿಗೆ ಸಲ್ಯೂಟ್: ತಂದೆಯ ವೃತ್ತಿ ಬದುಕಿನ ಅಪರೂಪದ ಕ್ಷಣ

ತಿರುಪತಿ, ಜ. 05: ತಾವು ಎಷ್ಟೇ ಕಷ್ಟಪಟ್ಟರೂ ಸರಿ ಮಕ್ಕಳು ವಿದ್ಯಾವಂತರಾಗಬೇಕೆಂದು ಎಲ್ಲ ತಂದೆ ತಾಯಿ ಬಯಸುತ್ತಾರೆ. ಆದರೆ ಪೋಷಕರ ಆಸೆ ಪೂರೈಸುವ ಮಕ್ಕಳು ಅಪರೂಪ. ಆದರೆ ಇಲ್ಲೊಂದು ಪೊಲೀಸ್ ಕುಟುಂಬ ಈ ಸವಾಲು ಗೆದ್ದಿದೆ.

ಹೌದು, ಇದೊಂದು ಅಸ್ಮರಣೀಯ ಘಟನೆ ಮಾತ್ರವಲ್ಲ, ತಂದೆಗೆ ಹೆಮ್ಮೆಯ ಕ್ಷಣ. ಸರ್ಕಲ್ ಇನ್ಸ್‌ಪೆಕ್ಟರ್ ಒಬ್ಬರು ತನಗಿಂತ ಉನ್ನತ ಅಧಿಕಾರಿಯಾದ ಸ್ವಂತ ಮಗಳಿಗೇ ಸಲ್ಯೂಟ್ ಹೊಡೆಯುತ್ತಿರುವ ಒಂದು ಅಸ್ಮರಣೀಯ ಘಟನೆ. ಆಂಧ್ರ ಪ್ರದೇಶದ ಈ ಅಪ್ಪ, ಮಗಳು ಇಬ್ಬರೂ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಮೊದಲ ಬಾರಿ ಕರ್ತವ್ಯದ ಮೇಲೆ ಇಬ್ಬರು ಎದುರಾದ ಸಂದರ್ಭ ಅಪ್ಪ ಮಗಳಿಗೆ ಸಲ್ಯೂಟ್ ಹೊಡೆದ ಹೃದಯಸ್ಪರ್ಶಿ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆಂಧ್ರದ ತಿರುಪತಿಯಲ್ಲಿ ಭಾನುವಾರ ಪೊಲೀಸ್ ಇಲಾಖೆ ಸಭೆ “ಇಗ್ನೈಟ್” ಅನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಅಪ್ಪ ಮಗಳು ಎದುರಾಗಿದ್ದಾರೆ. ಇದೇ ಮೊದಲ ಬಾರಿಗೆ ಕರ್ತವ್ಯದ ಮೇಲೆ ಇಬ್ಬರೂ ಭೇಟಿಯಾಗಿದ್ದು, ಸರ್ಕಲ್ ಇನ್ ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಪ್ಪ ಯೆಂಡಲೂರು ಶ್ಯಾಮ್ ಸುಂದರ್ ಹಾಗೂ ಡಿವೈಎಸ್ ಪಿ ಆಗಿರುವ ಮಗಳು ವೈ ಜೆಸ್ಸಿ ಪ್ರಶಾಂತಿ ಅವರಿಗೆ ಸಲ್ಯೂಟ್ ಹೊಡೆದಿದ್ದಾರೆ.

ನನ್ನ ತಂದೆಯೇ ನನಗೆ ದೊಡ್ಡ ಸ್ಫೂರ್ತಿ. ಜನರ ಸೇವೆಯನ್ನು ಯಾವುದೇ ಫಲಾಪೇಕ್ಷೆ ಇಲ್ಲದೇ ಮಾಡುತ್ತಾ ಬಂದ ತಂದೆಯನ್ನು ನೋಡಿ ಬೆಳೆದವಳು ನಾನು. ತನ್ನ ಕೈಯಿಂದ ಆಗುವ ಸಹಾಯವನ್ನು ಆಗಿನಿಂದ ಮಾಡುತ್ತಾ ಬಂದಿದ್ದಾರೆ. ಅದೇ ಕಾರಣ ನಾನು ಇಲಾಖೆಗೆ ಸೇರಲು ಸ್ಫೂರ್ತಿ 2018ರಲ್ಲಿ ಪೊಲೀಸ್ ಇಲಾಖೆ ಸೇರಿದೆ ಎಂದು ಪ್ರಶಾಂತಿ, ಪತ್ರಿಕೆಯೊಂದರ ಸಂದರ್ಶನದಲ್ಲಿ ಹೇಳಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ವೈ ಶ್ಯಾಮ್ ಸುಂದರ್ ಅವರು, ನನ್ನ ಮಗಳು ಪ್ರಾಮಾಣಿಕವಾಗಿ ಇಲಾಖೆಗೆ ಸೇವೆ ಸಲ್ಲಿಸುತ್ತಾಳೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

Exit mobile version