ಲಕ್ನೋ, ಜು. 24: ಬಂದೂಕು ಹಿಡಿದು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಭರದಲ್ಲಿ ಆಕಸ್ಮಿಕವಾಗಿ ಗುಂಡುಹಾರಿ ನವವಿವಾಹಿತೆ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಹರ್ದೋಯಿಯಲ್ಲಿ ನಡೆದಿದೆ.
ಮೃತಯುವತಿ ರಾಧಿಕಾ ಗುಪ್ತಾ (26) ತನ್ನ ಮಾವನ ಸಿಂಗಲ್ ಬ್ಯಾರೆಲ್ ಬಂದೂಕಿನ ಜೊತೆ ಸೆಲ್ಫಿ ಕ್ಲಿಕ್ಕಿಸುವಲ್ಲಿ ತೊಡಗಿದ್ದಳು. ಆದರೆ ಸೆಲ್ಫಿಗೆ ಪೋಸ್ ನೀಡುವ ವೇಳೆ ಬಂದೂಕಿನಲ್ಲಿ ಗುಂಡು ತುಂಬಿರುವುದು ಆಕೆಗೆ ತಿಳಿದಿರಲಿಲ್ಲ. ಹೀಗಾಗಿ ಅವರು ಬಂದೂಕಿನ ನಳಿಕೆಯನ್ನು ಎಳೆದಿದ್ದು, ಈ ಸಂದರ್ಭ ಗುಂಡು ಅವರ ಕುತ್ತಿಗೆಯನ್ನು ಹೊಕ್ಕಿದೆ.
ಕೂಡಲೇ ಆಕೆಯನ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಅವರು ಆಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಯುವತಿ ರಾಧಿಕಾ ಎರಡು ತಿಂಗಳ ಹಿಂದೆ ಆಕಾಶ್ ಗುಪ್ತಾ ಜೊತೆ ವಿವಾಹವಾಗಿತ್ತು ಎಂದು ಮಹಿಳೆಯ ಮಾವ ರಾಜೇಶ್ ಗುಪ್ತಾ ಪೊಲೀಸರಿಗೆ ತಿಳಿಸಿದ್ದಾರೆ. ಸದ್ಯ ಬಂದೂಕು ಹಾಗೂ ಮೊಬೈಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.