ಹೊಸ ಆಲ್ಬಂ ಸಾಂಗ್‌ನ ಮೂಲಕ ಮೋನಿಕಾ ಕಲ್ಲೂರಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ

ಆಲ್ಬಂ ಸಾಂಗ್​ವೊಂದು ಮೋನಿಕಾ ಕಲ್ಲೂರಿ ಆರ್ಟ್ಸ್​ ಪ್ರೊಡಕ್ಷನ್​ ಬ್ಯಾನರ್​ನಲ್ಲಿ ಇದೀಗ ಸಿದ್ಧವಾಗುತ್ತಿದೆ. ‘ನೋಡು ಶಿವ..’ ಶೀರ್ಷಿಕೆಯ ಈ ಹಾಡಿಗೆ ಚಂದನ್ ಶೆಟ್ಟಿ ಸಂಗೀತ ನೀಡಿ ಅವರೇ ಹಾಡನ್ನೂ ಹಾಡಿದ್ದಾರೆ. ಈ ಹಾಡಿಗೆ ಸುಮೀತ್ ಎಂ. ಕೆ ಸಾಹಿತ್ಯ ಬರೆದಿದ್ದು, ಪರಿಕಲ್ಪನೆ ಮತ್ತು ನಿರ್ದೇಶನ ಮಾಡುವುದರ ಜತೆಗೆ ಹಾಡಿನಲ್ಲಿಯೂ ಲೀಡ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಏನೆಂದರೆ, ಈ ಹಾಡಿನಲ್ಲಿ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಗ್ಲಾಮರಸ್​​ ಆಗಿ ಹೆಜ್ಜೆ ಹಾಕಲಿದ್ದಾರೆ. ಸ್ಪೇಷಲ್ ಅಪೀಯರೆನ್ಸ್ ಆಗಿ ಚಂದನ್ ಶೆಟ್ಟಿ ಸಹ ಇರಲಿದ್ದಾರೆ.

ಎಎಂಸಿ ಸಿಟಿ ಗ್ರೂಪ್​ ಆಫ್​ ಇನ್ಸಿಟ್ಯೂಷನ್ ಸೇರಿ ಒಟ್ಟು 9 ವಿದ್ಯಾ ಸಂಸ್ಥೆಗಳನ್ನು ನಡೆಸುತ್ತಿರುವ ಮತ್ತು ಆ ಸಂಸ್ಥೆಗಳ ವೈಸ್ ಪ್ರೆಸಿಡೆಂಟ್ ಆಗಿರುವ ಮೋನಿಕಾ ಕಲ್ಲೂರಿ, ಈ ಆಲ್ಬಂ ಹಾಡಿನ ಮೂಲಕ ಸ್ಯಾಂಡಲ್​ವುಡ್​ಗೆ ಆಗಮಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

‘ನೋಡು ಶಿವ ಎಂದೇ ಹಾಡು ಶುರುವಾಗಲಿದೆ. ಎಷ್ಟೋ ಜನ ಜೀವನದಲ್ಲಿ ಅಂದುಕೊಂಡಿದ್ದು ಏನೂ ಆಗಿಲ್ಲವಲ್ಲ ಎಂದು ತಮ್ಮನ್ನೇ ತಾವೇ ಶಪಿಸಿಕೊಳ್ಳುತ್ತಿರುತ್ತಾರೆ. ಎಷ್ಟೇ ಶ್ರಮ ಪಟ್ಟರೂ ಅದು ಈಡೇರುವುದಿಲ್ಲ. ಅಂದುಕೊಂಡ ಯಶಸ್ಸು ಸಿಕ್ಕಿರುವುದಿಲ್ಲ. ಈ ಥರದ ಹುಡುಗ ದೇವರ ಹತ್ತಿರ ಹೇಗೆ ಸಂಭಾಷಣೆ ಮಾಡ್ತಾನೆ.. ತನ್ನ ಗೋಳನ್ನು ಹೇಗೆ ಹೇಳಿಕೊಳ್ಳುತ್ತಾನೆ ಎಂಬುದನ್ನು ಫನ್ನಿಯಾಗಿ ಹಾಡಿನಲ್ಲಿ ತೋರಿಸಲಿದ್ದೇವೆ’ ಎನ್ನುತ್ತಾರೆ ಮೋನಿಕಾ.

 ‘ಕನ್ನಡದಲ್ಲಿ ಇಲ್ಲಿಯವರೆಗೂ ಯಾರೂ ಮಾಡದ ಅದ್ಧೂರಿಯಾದ ಹಾಡನ್ನು ನಾವು ಚಿತ್ರೀಕರಿಸಲಿದ್ದೇವೆ. ಆಲ್ಬಂ ಹಾಡಿನ ವಿಚಾರದಲ್ಲಿ ಕನ್ನಡದಲ್ಲಿ ಈ ಹಿಂದೆಂದೂ ಆಗದ ಒಂದು ಹೊಸತನವನ್ನು ಈ ಹಾಡಿನಲ್ಲಿ ತೋರಿಸಲಿದ್ದೇವೆ. ಅದ್ಧೂರಿ ವೆಚ್ಚದಲ್ಲಿ ಸಿದ್ಧವಾಗಲಿರುವ ಈ ಹಾಡು, ಪರಭಾಷಿಕರಿಗೂ ವಿಶೇಷ ಎನಿಸಲಿದೆ. ಸರಿಸುಮಾರು 30ಲಕ್ಷ ಬಜೆಟ್ ನಲ್ಲಿ ಈ ಹಾಡು ಸಿದ್ದವಾಗಲಿದೆ.’ ಎಂಬುದಾಗಿ ಮೋನಿಕಾ ಅವರು ಈ ಹಾಡಿನ ಮುಖ್ಯ ಉದ್ದೇಶವನ್ನು ವಿವರಿಸಿದ್ದಾರೆ.

ಹಾಡಿನ ಸಾಹಿತ್ಯ ಕೇಳಿದ ಚಂದನ್‌ ಶೆಟ್ಟಿ ಇಷ್ಟಪಟ್ಟು ಕೇವಲ ಎರಡೇ ತಾಸಿನಲ್ಲಿ ಚಂದನ್​ ಶೆಟ್ಟಿ ಕಂಪೋಸ್ ಮಾಡಿ, ಧ್ವನಿಯನ್ನೂ ನೀಡಿರುವುದು ವಿಶೇಷ. ಕಳೆದೊಂದು ತಿಂಗಳಿಂದ ಈ ಹಾಡಿನ ತಯಾರಿ ಕೆಲಸ ಶುರುವಾಗಿದ್ದು, 200 ಜನ ಈ ಹಾಡಿಗೆ ಕೆಲಸ ಮಾಡುತ್ತಿದ್ದಾರೆ. 60 ವೃತ್ತಿಪರ ಡಾನ್ಸರ್​ಗಳು ಹೆಜ್ಜೆ ಹಾಕಲಿದ್ದಾರೆ. ಮೂರು ದಿನಗಳಲ್ಲಿ ಎಎಂಸಿ ಕಾಲೇಜು ಕ್ಯಾಂಪಸ್​ನಲ್ಲಿಯೇ ಶೂಟಿಂಗ್​ ಮುಗಿಸಿಕೊಳ್ಳುವ ಪ್ಲಾನ್​ ತಂಡದ್ದಾಗಿದ್ದು, ಮೋಹನ್ ಮಾಸ್ಟರ್ ನೃತ್ಯ ನಿರ್ದೇಶನ ಮಾಡಲಿದ್ದಾರೆ.

ಇನ್ನು ವಿದೇಶದಲ್ಲಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡಿರುವ ಮೋನಿಕಾ, ಮೊದಲಿಂದಲೂ ಕಲೆಯತ್ತ ಆಸಕ್ತಿ. ಜಾಗೃತಿ ಮೂಡಿಸುವ ಕೆಲಸವನ್ನು ಏಕಕಾಲದಲ್ಲಿ ದೊಡ್ಡ ಸಮುದಾಯಕ್ಕೆ ತೋರಿಸುವ ಆಕ್ತಿ ಸಿನಿಮಾ ಕ್ಷೇತ್ರಕ್ಕಿದೆ. ಆ ಒಂದು ಕಾರಣಕ್ಕೆ ಸಿನಿಮಾ ಕ್ಷೇತ್ರವನ್ನು ಆಯ್ದುಕೊಂಡಿದ್ದು, ಮುಂದಿನ ವರ್ಷ ಹೊಸ ಸಿನಿಮಾ ನಿರ್ಮಾಣ ಮಾಡುವ ಬಗ್ಗೆಯೂ ಹೇಳಿಕೊಳ್ಳುತ್ತಾರೆ. ಅಂದಹಾಗೆ,ಡಿಸೆಂಬರ್ ವೇಳೆಗೆ ಆನಂದ್ ಆಡಿಯೋದಲ್ಲಿ ಈ ಹಾಡು ಬಿತ್ತರವಾಗಲಿದೆ.

Exit mobile version