ಬಸವರಾಜ ಬೊಮ್ಮಾಯಿ ಉತ್ತಮ ಕೆಲಸ ಮಾಡಲು ಅವಕಾಶ ನೀಡುವಂತೆ ಕೇಂದ್ರದ ಮೇಲೆ ಒತ್ತಡ ಹಾಕುತ್ತೇನೆ: ಮಾಜಿ ಸಿಎಂ ಕುಮಾರಸ್ವಾಮಿ

ಬೆಂಗಳೂರು, ಜು. 29: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿ ಅವರಿಗೆ ಉತ್ತಮ ಆಡಳಿತ ನೀಡುವ ನಿಟ್ಟಿನಲ್ಲಿ ಸೂಕ್ತ ಸಹಕಾರ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ನಾನೇ ಒತ್ತಡ ಹಾಕುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮ ಹಾಗೂ ಯಡಿಯೂರಪ್ಪ ಅವರ ನಡುವಿನ ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇರಬಹುದು. ಆದರೆ ಕಳೆದ ಎರಡು ವರ್ಷಗಳಲ್ಲಿ ಕೇಂದ್ರ ಸರ್ಕಾರ ಯಡಿಯೂರಪ್ಪಗೆ ಸೂಕ್ತ ಸಹಕಾರ ನೀಡಲಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿ ಎಂಬ ಭಾವನೆ ಮೂಡುವುದಕ್ಕೆ ಸಹ ಕೇಂದ್ರದ ಬಿಜೆಪಿ ನಾಯಕರು ಆಸ್ಪದ ನೀಡಲಿಲ್ಲ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸರಿಯಾದ ನೆರವು ಸಿಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಇದೇ ರೀತಿ ಇಕ್ಕಟ್ಟಿಗೆ ಸಿಲುಕಿಸುವ ಫಜೀತಿ ಇದೆ ಎಂಬುದು ನನ್ನ ಅಭಿಪ್ರಾಯ. ಹೀಗಾಗಿ ಕೇಂದ್ರ ಸರ್ಕಾರ ರಾಜ್ಯ ಹಲವಾರು ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ರಾಜ್ಯದ ಅಭಿವೃದ್ಧಿಗೆ ನೆರವಾಗುವಂತೆ ನೂತನ ಮುಖ್ಯಮಂತ್ರಿಗೆ ಸಹಕಾರ ನೀಡಬೇಕಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರದ ಮೇಲೆ ತಾವೇ ಒತ್ತಡ ಹಾಕುವುದಾಗಿ ತಿಳಿಸಿದ ಅವರು, ಯಾವುದೇ ಹಿಡಿತಕ್ಕೊಳಗಾಗದೆ ಒಳ್ಳೆಯ ಕೆಲಸ ಮಾಡಲಿ ಎಂದು ಬಸವರಾಜ ಬೊಮ್ಮಾಯಿಗೆ ಸಲಹೆ ನೀಡಿದರು.

ಅಲ್ಲದೇ, ಬಸವರಾಜ ಬೊಮ್ಮಾಯಿ ಬಿಜೆಪಿಯಿಂದ ಮುಖ‍್ಯಮಂತ್ರಿಯಾದರೂ ಜಾತ್ಯತೀತ ಜನತಾದಳದವರೇ ಮುಖ್ಯಮಂತ್ರಿ ಆಗಿದ್ದಾರೆ ಎಂಬ ಭಾವನೆ ನಮಗಿದೆ. ಬಸವರಾಜ ಬೊಮ್ಮಾಯಿ ನನ್ನ ಸ್ನೇಹಿತರು. ನನ್ನ ಹಿತೈಷಿ ಕೂಡ ಹೌದು. ಅವರು ಉತ್ತಮವಾಗಿ ಕೆಲಸ ಮಾಡಲಿ ಎಂದರು.

Exit mobile version