ಐಸಿಸಿ ದಶಕದ ತಂಡದಲ್ಲಿ ಪಾಕ್ ಆಟಗಾರರಿಗೆ ಸ್ಥಾನ ನೀಡದ ಬಗ್ಗೆ ‌ಶೋಯೆಬ್ ಅಕ್ತರ್ ‌ಕಿಡಿ

ಹೊಸದಿಲ್ಲಿ, ಡಿ. 29: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಬಿಡುಗಡೆ ಮಾಡಿರುವ ದಶಕದ ಕ್ರಿಕೆಟ್ ‌ತಂಡದಲ್ಲಿ ಪಾಕಿಸ್ತಾನ ತಂಡದ ಆಟಗಾರರನ್ನು ಪರಿಗಣಿಸದ ಬಗ್ಗೆ ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ಶೋಯೆಬ್‌ ಅಕ್ತರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಐಸಿಸಿ ನಡೆಯ ಬಗ್ಗೆ ‌ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಪಾಕಿಸ್ತಾನ ತಂಡದ ಯಾವುದೇ ಓರ್ವ ಆಟಗಾರರಿಗೆ ಐಸಿಸಿ‌ ಪ್ರಕಟಿಸಿರುವ ದಶಕದ ತಂಡದಲ್ಲಿ ‌ಸ್ಥಾನ ನೀಡದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಪಾಕ್ ತಂಡದ ಬ್ಯಾಟ್ಸ್‌ಮನ್ ಬಾಬರ್ ಆಜ಼ಂ ಅವರಿಗೆ ಐಸಿಸಿ ದಶಕದ ಟಿ20 ತಂಡದಲ್ಲಿ ಸ್ಥಾನ ನೀಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

ಪಾಕಿಸ್ತಾನ ‌ತಂಡ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಸದಸ್ಯ ಹಾಗೂ ‌ಟಿ20 ಆಡುವ ತಂಡ ಎಂಬುದನ್ನು ‌ಐಸಿಸಿ ಮರೆತಂತಿದೆ. ಪ್ರಸ್ತುತ ಐಸಿಸಿ ಟಿ20 ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿರುವ ಬಾಬರ್ ಆಜ಼ಂ ಅವರನ್ನು ಸಹ ತಂಡಕ್ಕೆ ಆಯ್ಕೆ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪಾಕ್ ತಂಡದ ಪರ‌ ಅತ್ಯುತ್ತಮ ಬ್ಯಾಟಿಂಗ್ ಸರಾಸರಿ ಹೊಂದಿರುವ ‌ಹಾಗೂ ಅತ್ಯಧಿಕ ರನ್‌ಗಳಿಸಿರುವ ಬಾಬರ್ ಆಜ಼ಂ ಸಹ ವಿರಾಟ್ ಕೊಹ್ಲಿ ಅವರಂತೆ ಪಾಕಿಸ್ತಾನಕ್ಕಾಗಿ ಕೊಡುಗೆ ನೀಡಿದ್ದಾರೆ. ಹಾಲಿ ಐಸಿಸಿ ಪ್ರಕಟಿಸಿರುವ ತಂಡ ಐಪಿಎಲ್ ತಂಡದಂತಿದೆ ಹೊರತು ವಿಶ್ವ ಇಲೆವೆನ್ ತಂಡದಂತಿಲ್ಲ ಎಂದು ಟೀಕಿಸಿರುವ ಅವರು, ಐಸಿಸಿ ಕೇವಲ ‌ಹಣ ಗಳಿಕೆಗೆ, ಟಿವಿ ‌ಪ್ರಾಯೋಜಕತ್ವ ಹಾಗೂ ‌ಟಿವಿ‌ ಹಕ್ಕುಗಳನ್ನು ‌ಪಡೆಯುವ ಬಗ್ಗೆ ಆದ್ಯತೆ ನೀಡುತ್ತಿದೆ ಎಂದು ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ‌ಹೇಳಿದ್ದಾರೆ.

Exit mobile version