ಬಿಬಿಎಂಪಿಯಲ್ಲಿ ಭಾರಿ ಅಕ್ರಮ: ಕೊರೊನಾ ಹೆಸರಲ್ಲಿ ಕೋಟಿ ಕೋಟಿ ಲೂಟಿ!

Bengaluru: ಬಿಬಿಎಂಪಿ (BBMP)ಯಲ್ಲಿ ನಡೆದಿರುವ ಅಕ್ರಮಗಳು ಹೊರಬರುತ್ತಿದ್ದು, ಲೆಕ್ಕ ಪರಿಶೋಧಕರ ವರದಿಯಲ್ಲಿ ಒಂದೊಂದೇ ವಿಚಾರ ಬಹಿರಂಗವಾಗುತ್ತಿದೆ. ಕೋವಿಡ್‌ ಆರ್‌ಟಿಪಿಸಿಆರ್‌ (RTPCR) ಪರೀಕ್ಷೆಗೆ ನಿಗದಿಪಡಿಸಿದ್ದ ದರಕ್ಕಿಂತ ಹೆಚ್ಚು ಪಾವತಿ, ಸೋಂಕಿತರಿಗೆ ಆಹಾರ ಪೂರೈಕೆ, ಔಷಧಿ ಹಾಗೂ ಇತರೆ ಸಾಮಗ್ರಿ ಖರೀದಿಯಲ್ಲೂ ಅಕ್ರಮ. ಸಾಮರ್ಥ್ಯಕ್ಕಿಂತ ಹೆಚ್ಚು ಪರೀಕ್ಷೆ ಮಾಡಿರುವ ಲೆಕ್ಕ ಕೊಟ್ಟು ಕೋಟ್ಯಂತರ ರೂ. ಲೂಟಿ ಮಾಡಲಾಗಿದೆ ಎನ್ನಲಾಗುತ್ತಿದೆ.

Covid

2021-22ನೇ ಸಾಲಿನ ಲೆಕ್ಕ ಪರಿಶೋಧಕರ ವರದಿಯಲ್ಲಿ ಕೊರೊನಾದ ಎರಡನೇ ಅಲೆ ನಿಯಂತ್ರಣದ ಹೆಸರಿನಲ್ಲಿ ಕೋಟ್ಯಂತರ ರೂ. ಲೂಟಿ ಮಾಡಿರುವುದನ್ನು ಎಳೆಎಳೆಯಾಗಿ ಬಿಚ್ಚಿಡಲಾಗಿದ್ದು, ಸೋಂಕಿನಿಂದ ಮೃತಪಟ್ಟವರ ಶವ ಸಾಗಣೆಗೆ ಬಳಸಿದ್ದ ಆಂಬ್ಯುಲೆನ್ಸ್‌ (Ambulance) ವಾಹನಗಳ ಸಂಖ್ಯೆಯಲ್ಲೂ ತಪ್ಪು ಲೆಕ್ಕ ನೀಡಿ ಅಕ್ರಮವೆಸಗಲಾಗಿದೆ.

ಬಿಬಿಎಂಪಿಯ 198 ವಾರ್ಡ್‌ಗಳ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗಂಟಲಿನ ದ್ರವ ಮಾದರಿಯನ್ನು ಸರಕಾರಿ, ಖಾಸಗಿ ಲ್ಯಾಬ್‌ಗಳಿಗೆ ಕಳುಹಿಸಿ ಪರೀಕ್ಷೆ ನಡೆಸಲಾಗಿತ್ತು. ಇದಕ್ಕೆ ಸಂಬಂಧಿಸಿದ ಕಡತಗಳು, ಬಿಲ್‌ಗಳನ್ನು ಪರಿಶೀಲಿಸಿದಾಗ 2020-21 ಮತ್ತು 2021-22ರಲ್ಲಿಯೂರೊಫಿನ್ಸ್‌ ಮತ್ತು ಹೈಬ್ರಿನೊಮಿಕ್ಸ್‌ ಸಂಸ್ಥೆಗೆ ಹೆಚ್ಚುವರಿಯಾಗಿ 43.68 ಲಕ್ಷ ರೂ. ಪಾವತಿ ಮಾಡಿರುವುದು ಕಂಡು ಬಂದಿದೆ.

ಪಾಲಿಕೆ ಆಯುಕ್ತರ ಸುತ್ತೋಲೆಯಲ್ಲಿ ನಿಗದಿಪಡಿಸಿರುವ ಪರೀಕ್ಷಾ ಸಾಮರ್ಥ್ಯಕ್ಕಿಂತಲೂ ಹೆಚ್ಚುವರಿ ಪರೀಕ್ಷೆ ಕೈಗೊಂಡಿರುವುದಾಗಿ ಲೆಕ್ಕ ನೀಡಿ 63.65 ಲಕ್ಷ ರೂ. ಲಪಟಾಯಿಸಲಾಗಿದೆ. ಅಷ್ಟೇ ಅಲ್ಲ, ದಿನಕ್ಕೆ 500 ಪರೀಕ್ಷಾ ಸಾಮರ್ಥ್ಯವಿದ್ದರೂ, ನಿತ್ಯ 1500 ಪರೀಕ್ಷೆ ಮಾಡಿರುವ ಲೆಕ್ಕ ಕೊಟ್ಟು ಖಾಸಗಿ ಆಸ್ಪತ್ರೆಯೊಂದಕ್ಕೆ 10.23 ಕೋಟಿ ರೂ. ಪಾವತಿಸಿ ಅಕ್ರಮವೆಸಗಿದ್ದಾರೆ.

ಕೋವಿಡ್‌ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಪ್ರಕರಣಗಳ ಸಂಖ್ಯೆ ನಮೂದಿಸದೆಯೇ ಬಿಲ್‌ಗಳನ್ನು ಪಾವತಿ ಮಾಡಿದ್ದು, 3.97 ಕೋಟಿ ರೂ.ಗಳಿಗೆ ಆಕ್ಷೇಪಣೆ ಸಲ್ಲಿಸಲಾಗಿದೆ. ಬೆನಕ ಮೆಡಿಟೆಕ್‌ (Benaka Meditech) ಅವರಿಂದ 14 ಹೆರಿಗೆ ಆಸ್ಪತ್ರೆಗಳಿಗೆ ಕೇಂದ್ರೀಕೃತ ಗ್ಯಾಸ್‌ ಪೈಪ್‌ಲೈನ್‌ (Gas Pipeline) ಅಳವಡಿಕೆಗಾಗಿ 2.53 ಕೋಟಿ ರೂ. ಪಾವತಿಸಲಾಗಿದೆ. ಇದರ ವಾರ್ಷಿಕ ನಿರ್ವಹಣೆ ಕುರಿತು ಪೂರಕ ದಾಖಲೆಗಳನ್ನು ಒದಗಿಸದ ಕಾರಣ ಈ ಮೊತ್ತಕ್ಕೆ ಲೆಕ್ಕ ಪರಿಶೋಧಕರು ಆಕ್ಷೇಪಿಸಿದ್ದಾರೆ.

ಜಯನಗರ ವಲಯಕ್ಕೆ 44 ಬಿಎಲ್‌ಎಸ್‌ ಆಂಬ್ಯುಲೆನ್ಸ್‌ (BLS Ambulance) ಗಳನ್ನು ನಿಯೋಜಿಸಲಾಗಿತ್ತು. ಆದರೆ, 44ರ ಬದಲಿಗೆ 46 ವಾಹನಗಳಿಗೆ ಬಿಲ್‌ ಪಾವತಿಸಿ 2.80 ಲಕ್ಷ ರೂ. ವಂಚಿಸಲಾಗಿದೆ. ಸೋಂಕಿನಿಂತ ಮೃತಪಟ್ಟವರ ಸಾಗಣೆಗೆ ಬಳಸಿದ್ದ ಆಂಬ್ಯುಲೆನ್ಸ್‌ ವಾಹನಗಳು ಕಾರ್ಯನಿರ್ವಹಿಸಿದ ದಿನಗಳಿಗಿಂತಲೂ ಹೆಚ್ಚಿನ ದಿನಗಳಿಗೆ ಬಿಲ್‌ ಪಾವತಿಸಿ 10.05 ಲಕ್ಷ ರೂ. ಲೂಟಿ ಹೊಡೆಯಲಾಗಿದೆ.

ಕೋವಿಡ್‌ (Covid) ಆರೈಕೆ ಕೇಂದ್ರದಲ್ಲಿಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿಗೆ ಹೋಟೆಲ್‌ಗಳಲ್ಲಿ ಊಟೋಪಚಾರ, ವಸತಿ ವ್ಯವಸ್ಥೆ ಕಲ್ಪಿಸಿದ್ದಕ್ಕೆ ಸಂಬಂಧಿಸಿದಂತೆ 12.19 ಲಕ್ಷ ರೂ. ಪಾವತಿಸಲಾಗಿದೆ. ಆದರೆ, ಹೋಟೆಲ್‌ನಲ್ಲಿ ಸೌಲಭ್ಯ ಕಲ್ಪಿಸಿದ ದಿನಾಂಕಗಳು, ಕೊಠಡಿಯ ದಿನದ ಬಾಡಿಗೆ ದರದ ಮಾಹಿತಿ, ಒದಗಿಸಿರುವ ಆಹಾರದ ದರ, ಎಷ್ಟು ದಿನ ಕೊಠಡಿಗಳನ್ನು ಬಾಡಿಗೆಗೆ ಪಡೆಯಲಾಗಿತ್ತು ಎಂಬ ಮಾಹಿತಿಯೇ ಇಲ್ಲ.

Exit mobile version