ಭಾವನೆಗಳ ಜೊತೆಗೆ ರಾಜಕೀಯ ನಡೆಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಭಾಷಾ ಭಾವೈಕ್ಯತೆಯನ್ನೂ ಕಾಪಾಡಬೇಕಿದೆ: ಎಚ್‌ಡಿಕೆ

ಬೆಂಗಳೂರು,ಜೂ.28: ಭಾವನೆಗಳ ಜೊತೆಗೆ ರಾಜಕೀಯ ನಡೆಯುತ್ತಿರುವ ಇಂದಿನ ಕಾಲಘಟ್ಟದಲ್ಲಿ  ಭಾಷಾ ಭಾವೈಕ್ಯತೆಯನ್ನೂ ಕಾಪಾಡಿಕೊಂಡು ಹೋಗಬೇಕಾದ ಅನಿರ್ವಾರ್ಯತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಕಾಸರಗೋಡು ಜಿಲ್ಲೆಯ ಮಂಜೇಶ್ವರ ಹಾಗೂ ಅಲ್ಲಿನ ಕೆಲವು ಗ್ರಾಮಗಳ ಕನ್ನಡದ ಹೆಸರುಗಳನ್ನು ಮಲಯಾಳಿ ಭಾಷೆಗೆ ಬದಲಾಯಿಸುವ ಪ್ರಕ್ರಿಯೆಯನ್ನು ಕೇರಳ ಸರ್ಕಾರ ಪ್ರಾರಂಭಿಸಿರುವ ಕುರಿತು ಟ್ವೀಟ್ ಮಾಡಿರುವ ಅವರು, ಹೆಸರು ಬದಲಾಯಿಸುವ ಈ ಪ್ರಕ್ರಿಯೆ ಆರಂಭಿಸುವುದಕ್ಕೂ ಮೊದಲು ಕೇರಳ ಸರ್ಕಾರಕ್ಕೆ ಕೆಲ ಅಂಶಗಳನ್ನು ಗಮನಕ್ಕೆ ತರಲು ನಾನು ಬಯಸುತ್ತೇನೆ.

ಕಾಸರಗೋಡು ಕರ್ನಾಟಕದೊಂದಿಗೂ ಬೆಸೆದುಕೊಂಡ ಪ್ರದೇಶ.ಅಲ್ಲಿನ ಜನರೊಂದಿಗೆ ಕರ್ನಾಟಕ & ಕನ್ನಡಿಗರು ಸಾಂಸ್ಕೃತಿಕ ಒಡನಾಟ ಹೊಂದಿದ್ದಾರೆ. ಕಾಸರಗೋಡು ಭಾಷಾ ಸಾಮರಸ್ಯದ,ಸೌಹಾರ್ದತೆಯ ಪ್ರತೀಕವಾಗಿ ಉಳಿದುಕೊಂಡಿದೆ. ಕಾಸರಗೋಡಿನಲ್ಲಿ ಕನ್ನಡ & ಮಲಯಾಳಿ ಭಾಷಿಕರು ಸಮಾನ ಸಂಖ್ಯೆಯಲ್ಲಿದ್ದರೂ, ಪರಸ್ಪರರೂ ಪೂರಕವಾಗಿ, ಪ್ರೇರಕವಾಗಿ ಬದುಕುತ್ತಿದ್ದಾರೆ. ಅಲ್ಲಿನವರಿಗೆ ಭಾಷೆಯ ವಿಚಾರದಲ್ಲಿ ಎಂದಿಗೂ ಕಲಹ ಬಂದಿಲ್ಲ. ಇದನ್ನು ನಾವು ಭವಿಷ್ಯದಲ್ಲೂ ಕಾಪಾಡಿಕೊಂಡು ಹೋಗಬೇಕಾದ ಅಗತ್ಯವಿದೆ. ಭಾವನೆಗಳೊಂದಿಗೆ ರಾಜಕೀಯ ನಡೆಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಭಾಷಾ ಭಾವೈಕ್ಯತೆಯನ್ನಿ ಕಾಪಾಡಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ.

ಹೀಗಾಗಿ, ಅಲ್ಲಿನ ಕನ್ನಡಿಗರ ಪರಂಪರಾಗತ ಭಾವನೆಗಳನ್ನು ಕಾಪಾಡುವುದು ಎರಡೂ ರಾಜ್ಯಗಳ ಕರ್ತವ್ಯ ಎಂಬುದು ನನ್ನ ಭಾವನೆ. ಗ್ರಾಮಗಳ ಈಗಿನ ಕನ್ನಡ ಹೆಸರನ್ನು, ಮಲಯಾಳಿಗೆ ರೂಪಾಂತರ ಮಾಡಲಾಗುತ್ತಿದೆ. ಅದರೆ ಅರ್ಥವನ್ನು ಹಾಗೆಯೇ ಉಳಿಸಿಕೊಂಡಂತೆ ಕಾಣುತ್ತಿದೆ. ಗ್ರಾಮದ ಹೆಸರಿನ ಅರ್ಥವನ್ನು ಕಾಪಾಡಿಕೊಳ್ಳುವ ಉದ್ದೇಶ ಹೊಂದಿರುವ ಕೇರಳ ಸರ್ಕಾರ ಅವುಗಳ ಮೂಲ ಕನ್ನಡದ ಹೆಸರನ್ನೂ ಹಾಗೇಯೇ ಕಾಪಾಡಬೇಕೆಂದು ನಾನು ಈ ಮೂಲಕ ವಿನಂತಿ ಮಾಡುತ್ತೇನೆ ಎಂದಿದ್ದಾರೆ.

Exit mobile version