ಮಡಿಕೇರಿ ಆಸ್ಪತ್ರೆಯಲ್ಲಿ ನಿಲ್ಲದ ಕಳ್ಳತನ: ಮೃತ ಮಹಿಳೆಯ ಚಿನ್ನದ ತಾಳಿ ಸರ ಕಳವು

ಕೊಡಗು, ಮೇ. 25: ಕೋವಿಡ್ ಸೋಂಕಿನಿಂದ ಮೃತಪಟ್ಟ ಮಹಿಳೆ ಫೋನ್ ಕಳ್ಳತನವಾಗಿದ್ದ ಪ್ರಕರಣ ಆಕೆಯ ಮಗಳ ಮನವಿಯಿಂದಾಗಿ ರಾಜ್ಯಾದ್ಯಂತ ಪ್ರಚಾರವಾದ ಬೆನ್ನಲ್ಲೇ ಇದೇ ಆಸ್ಪತ್ರೆಯಲ್ಲಿ ಮೃತ ವೃದ್ಧೆಯ ಚಿನ್ನದ ತಾಳಿಯ ಸರವನ್ನೇ ಕಳವು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕೋವಿಡ್ ನಿಂದ ಮೃತಪಟ್ಟ ಕಮಲ ಎಂಬ ವೃದ್ಧೆಯ ಅಂದಾಜು ಒಂದುವರೆ ಲಕ್ಷ ಮೌಲ್ಯದ 25 ಗ್ರಾಂ ತೂಕದ ಚಿನ್ನದ ಸರವನ್ನ ಕಳ್ಳತನ ಮಾಡಿರುವ ಆರೋಪ ಕೇಳಿ ಬಂದಿದ್ದು, ಈ ಕುರಿತು ದೂರು ದಾಖಲಾಗಿದೆ.

ಸೋಮವಾರಪೇಟೆ ತಾಲೂಕಿನ ರಸೂಲ್ ಪುರ ಗ್ರಾಮದ ಕಮಲಾ ಅವರನ್ನು ಮೇ 1 ರಂದು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದು ಸಾಮಾನ್ಯ ವಾರ್ಡಿನಲ್ಲೇ ದಾಖಲಾಗಿದ್ದ ಕಮಲ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿದ್ದರಿಂದ, ಮೇ 2 ರಂದು ಐಸಿಯು ವಾರ್ಡಿಗೆ ಶಿಫ್ಟ್ ಮಾಡಲಾಗಿತ್ತು. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಕಮಲ ಅವರ ಕೊರಳಿನಲ್ಲಿದ್ದ ಚಿನ್ನದ ತಾಳಿ ಸರವನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಐಸಿಯು ವಾರ್ಡಿನಲ್ಲಿ ಸ್ವಲ್ಪ ಚೇತರಿಸಿಕೊಂಡಿದ್ದ ವೃದ್ಧೆ ಕಮಲ ತನ್ನ ಮಗ ಮೊಣ್ಣಪ್ಪ ಅವರಿಗೆ ಕರೆ ಮಾಡಿ ತಾಳಿ ಸರವನ್ನು ದಾದಿಯರು ಪಡೆದುಕೊಂಡಿರುವ ಬಗ್ಗೆ ತಿಳಿಸಿದ್ದರು ಎನ್ನಲಾಗಿದೆ. ಚಿಕಿತ್ಸೆ ಫಲಕಾರಿ ಆಗದೆ ಮೇ 19ರಂದು ಕಮಲ ಮೃತಪಟ್ಟಿದ್ದರು. 20 ರಂದು ಅಂತ್ಯಕ್ರಿಯೆ ನೆರವೇರಿಸಿದ ಮೊಣ್ಣಪ್ಪ 21ರಂದು ಮಡಿಕೇರಿ ಆಸ್ಪತ್ರೆಗೆ ಬಂದು ತನ್ನ ತಾಯಿಯ ವಸ್ತುಗಳನ್ನು ಕೇಳಿದ್ದಾರೆ. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಕೇವಲ ಬ್ಯಾಗನ್ನು ಮಾತ್ರ ನೀಡಿದರು. ತನ್ನ ತಾಯಿಯ ಚಿನ್ನದ ಸರವನ್ನು ಕೊಟ್ಟಿಲ್ಲ ಎಂದು ಮೊಣ್ಣಪ್ಪ ಕೋವಿಡ್ ಆಸ್ಪತ್ರೆ ಡೀನ್ ಮತ್ತು ಮಡಿಕೇರಿ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌, ಆಸ್ಪತ್ರೆಯಲ್ಲಿ ಈ ರೀತಿ ಆಗಬಾರದಿತ್ತು. ಇದು ಅತ್ಯಂತ ಅಮಾನವೀಯ ಘಟನೆ. ಈ ಕುರಿತು ಈಗಾಗಲೇ ಆಸ್ಪತ್ರೆಯಲ್ಲಿ ತನಿಖೆ ನಡೆಯುತ್ತಿದೆ. ಎಲ್ಲಾ ವಾರ್ಡುಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಲಾಗುತ್ತಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಯಲಿದೆ ಎಂದಿದ್ದಾರೆ.

Exit mobile version