New Delhi: ಕೆನಡಾದಲ್ಲಿ (Canada) ಇದೇ ವರ್ಷದ ಜೂನ್ ನಲ್ಲಿ ನಡೆದಿದ್ದ ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಆರೋಪಿಸಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಅವರ ಆರೋಪವನ್ನು ಭಾರತ ಸಾರಾಸಗಟಾಗಿ ತಿರಸ್ಕರಿಸಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಭಾರತದ ವಿದೇಶಾಂಗ ಇಲಾಖೆ ಕೆನಡಾದಲ್ಲಿ ನಡೆಯುವ ಯಾವುದೇ ವಿಧ್ವಂಸಕ ಕೃತ್ಯಗಳಿಗೆ ಭಾರತವನ್ನು ಹೊಣೆಗಾರರನ್ನಾಗಿ ಮಾಡುವ ಪ್ರಯತ್ನವನ್ನು ಕೆನಡಾ ಈ ಹಿಂದಿನಿಂದಲೂ ಮಾಡುತ್ತಾ ಬಂದಿದೆ. ಇಂಥ ಆರೋಪಗಳನ್ನು ಭಾರತ ಸ್ಪಷ್ಟವಾಗಿ ನಿರಾಕರಿಸುತ್ತದೆ ಎಂದು ಹೇಳಿದೆ.
ಕೆನಡಾದ ಸಂಸತ್ತಿನಲ್ಲಿ ಸೆ.18ರಂದು ಮಾತನಾಡಿದ ಜಸ್ಟಿನ್ ಟ್ರುಡೊ ಇದೇ ವರ್ಷ ಜೂನ್ ನಲ್ಲಿ ನಡೆದಿದ್ದ ಹರ್ದೀಪ್ ಸಿಂಗ್ #Hardeep Singh ಹತ್ಯೆಯ ಹಿಂದೆಯ ತನಿಖೆ ನಡೆಸುತ್ತಿರುವ ಕೆನಡಾದ ಸರ್ಕಾರಿ ಏಜೆನ್ಸಿಗಳು, ಈ ಕೊಲೆಯ ಹಿಂದೆ ಭಾರತದ ಕೈವಾಡ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಈ ಖಲಿಸ್ತಾನಿ ಪ್ರತ್ಯೇಕತಾವಾದಿಯ ಹತ್ಯೆಯನ್ನು ಮಾಡಿದ ಗುಂಪುಗಳಿಗೆ, ಭಾರತದ ಏಜೆಂಟ್ (Agent) ಗಳು ನಂಟು ಹೊಂದಿರುವ ವಿಚಾರ ತನಿಖೆಯ ವೇಳೆಯಲ್ಲಿ ಬಯಲಾಗಿದೆ’’ ಎಂದು ಹೇಳಿದ್ದರು. ಇದಕ್ಕೆ ಭಾರತ ಕೊಟ್ಟಿರುವ ಪ್ರತಿಕ್ರಿಯೆ ಹೀಗಿದೆ.
ಕಾನೂನಿಗೆ ಬದ್ಧ
ಭಾರತದ ವಿದೇಶಾಂಗ ಸಚಿವಾಲಯವು ಜಸ್ಟಿನ್ ಅವರ ಈ ಹೇಳಿಕೆಯನ್ನು ತೀಕ್ಷ್ಣ ಶಬ್ದಗಳಿಂದ ಖಂಡಿಸಿದ್ದು, ಕೆನಡಾ ಪ್ರಧಾನಿ ಹಾಗೂ ಅಲ್ಲಿನ ವಿದೇಶಾಂಗ ಸಚಿವರು ಅಲ್ಲಿ ನಡೆದಿರುವ ಕೊಲೆ ಪ್ರಕರಣವೊಂದಕ್ಕೆ ಹಾಗೂ ಅಲ್ಲಿ ನಡೆಯುವ ವಿಧ್ವಂಸಕ ಕೃತ್ಯಗಳಿಗೆ ಭಾರತದ ಹೆಸರನ್ನು ಥಳುಕು ಹಾಕುವಂಥ ಹೇಳಿಕೆಯನ್ನು ನೀಡಿದ್ದು, ಆ ಹೇಳಿಕೆಗಳು ಅಸಂಬದ್ಧವಾಗಿವೆ ಹಾಗೂ ದುರುದ್ದೇಶಪೂರಿತವಾಗಿವೆ. ನಮ್ಮದು ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟಿರುವ ದೇಶವಾಗಿದ್ದು, ಕಾನೂನು – ಸುವ್ಯವಸ್ಥೆಯನ್ನು ಪಾಲಿಸುವ ಬದ್ಧತೆಯನ್ನು ಹೊಂದಿರುವ ರಾಷ್ಟ್ರವಾಗಿದೆ’ ಎಂದು ಹೇಳಿದೆ.
ನಮ್ಮ ಪ್ರಧಾನಿಯವರ ವಿರುದ್ಧ ಕೆನಡಾ ಪ್ರಧಾನಿಯವರು ಈ ಹಿಂದೆಯೂ ಇಂಥದ್ದೇ ಮಾತುಗಳನ್ನಾಡಿದ್ದರು. ಅದೆಲ್ಲವನ್ನೂ ಭಾರತ ಸಾರಾಸಗಟಾಗಿ ನಿರಾಕರಿಸಿತ್ತು. ಈಗ ಮಾಡುತ್ತಿರುವ ಆರೋಪವನ್ನೂ ಅದೇ ರೀತಿ ತಿರಸ್ಕರಿಸುತ್ತಿದ್ದೇವೆ. ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂಥ ಹಾಗೂ ಅಖಂಡ ಭಾರತವನ್ನು ವಿಭಜನೆ ಮಾಡುವ ಕುತ್ಸಿತ ಮನಸ್ಸುಗಳುಳ್ಳ ವ್ಯಕ್ತಿಗಳಿಗೆ ಕೆನಡಾ ಸರ್ಕಾರ ಆಶ್ರಯ ನೀಡಿದೆ.
ಭಾರತದ ವಿದೇಶಾಂಗ ಸಚಿವಾಲಯ, ಕೆನಡಾ @Canada ಸರ್ಕಾರವನ್ನು ಈ ಬಗ್ಗೆ ಭಾರತವು, ಮೊದಲಿನಿಂದಲೂ ಕೆನಡಾ ದೇಶವನ್ನು ಎಚ್ಚರಿಸುತ್ತಾ ಬಂದಿದ್ದರೂ ಭಾರತದ ಕಾಳಜಿಯನ್ನು ಕೆನಡಾ ಅವಗಣನೆ ಮಾಡುತ್ತಲೇ ಬಂದಿದೆ’ ಎಂದು ತನ್ನ ಪ್ರಕಟಣೆಯಲ್ಲಿ ತರಾಟೆಗೆ ತೆಗೆದುಕೊಂಡಿದೆ.
ವಿದೇಶಾಂಗ ಇಲಾಖೆಯು ಕೆನಡಾದಲ್ಲಿ ಭಾರತ ವಿರೋಧಿ ಶಕ್ತಿಗಳಿಗೆ ಆಶ್ರಯ ಕೊಟ್ಟಿರುವುದಷ್ಟೇ ಅಲ್ಲ ಹಲವಾರು ಸಂದರ್ಭಗಳಲ್ಲಿ ಅಲ್ಲಿನ ರಾಜಕಾರಣಿಗಳು ಇಂಥ ಶಕ್ತಿಗಳ ಬಗ್ಗೆ ಬಹಿರಂಗವಾಗಿಯೇ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಇದು ನಿಜಕ್ಕೂ ಖೇದಕರ ಹಾಗೂ ತೀವ್ರ ಆಕ್ಷೇಪಾರ್ಹವಾದಂಥ ವಿಚಾರ’ ಎಂದು ಹೇಳಿದೆ.
ಭವ್ಯಶ್ರೀ ಆರ್.ಜೆ