ಭಾರತ ಹಾಗೂ ಇಂಗ್ಲೆಂಡ್ ಪ್ರಥಮ ಟೆಸ್ಟ್: ಕುತೂಹಲ ಘಟ್ಟದಲ್ಲಿ ಪಂದ್ಯ

ಚೆನ್ನೈ, ಫೆ. 09: ಅತಿಥೇಯ ಭಾರತ ಹಾಗೂ ಪ್ರವಾಸಿ ಇಂಗ್ಲೆಂಡ್ ‌ತಂಡಗಳ ನಡುವಿನ ಪ್ರಥಮ ಟೆಸ್ಟ್ ಪಂದ್ಯದ ಕುತೂಹಲ ಘಟ್ಟ ತಲುಪಿದೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಬೌಲರ್‌ಗಳ ಮೇಲುಗೈ ನಡುವೆಯೂ ಬೃಹತ್ ಮುನ್ನಡೆ ಸಾಧಿಸಿರುವ ಇಂಗ್ಲೆಂಡ್, ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ.

ಇಲ್ಲಿನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಟೀಂ ಬೌಲಿಂಗ್ ದಾಳಿಗೆ ನಲುಗಿದ ಇಂಗ್ಲೆಂಡ್, ದ್ವಿತೀಯ ಇನ್ನಿಂಗ್ಸ್‌ನಲ್ಲಿ 178 ರನ್‌ಗಳಿಗೆ ಸರ್ವಪತನ ಕಂಡಿತು. ಪರಿಣಾಮ ಮೊದಲ ಇನ್ನಿಂಗ್ಸ್‌ನ ಮುನ್ನಡೆ ಮೊತ್ತ 241 ರನ್‌ಗಳೊಂದಿಗೆ 419 ರನ್‌ಗಳ ಬೃಹತ್‌ ಮುನ್ನಡೆ ಸಾಧಿಸಿತು. ಆ ಮೂಲಕ ಟೀಂ ಇಂಡಿಯಾಕ್ಕೆ 420 ರನ್‌ಗಳ ಕಠಿಣ ಸವಾಲು ನೀಡಿದೆ. ಈ ಬೃಹತ್ ಸವಾಲು ಬೆನ್ನತ್ತಿರುವ ಭಾರತ, ನಾಲ್ಕನೇ ದಿನದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 39 ರನ್‌ಗಳಿಸಿದ್ದು, 381 ರನ್‌ಗಳ ಹಿನ್ನಡೆ ಹೊಂದಿದೆ.

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಉತ್ತಮ ಬೌಲಿಂಗ್ ದಾಳಿ ನಡೆಸಿದ ಭಾರತೀಯ ಬೌಲರ್‌ಗಳು ಎದುರಾಳಿ ತಂಡವನ್ನು 178 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಭಾರತದ ಪರ ಪರಿಣಾಮಕಾರಿ ಬೌಲಿಂಗ್ ಪ್ರದರ್ಶಿಸಿದ ರವಿಚಂದ್ರನ್ ಅಶ್ವಿನ್ 61ಕ್ಕೆ 6 ವಿಕೆಟ್ ಪಡೆದರೆ, ನದೀಮ್ 2, ಇಶಾಂತ್ ಹಾಗೂ ಬುಮ್ರಾ ತಲಾ‌ 1 ವಿಕೆಟ್ ಪಡೆದರು.

ಇದಕ್ಕೂ ಮುನ್ನ ನಾಲ್ಕುನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 337 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಉತ್ತಮ ಬ್ಯಾಟಿಂಗ್ ‌ಪ್ರದರ್ಶಿಸಿದ ವಾಷಿಂಗ್ಟನ್ ಸುಂದರ್(ಅಜೇಯ 85) ರನ್‌ಗಳಿಸಿದರೆ. ಇವರಿಗೆ ಉತ್ತಮ ಸಾಥ್ ನೀಡಿದ ಅಶ್ವಿನ್ (31) ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು. ಕೊನೆಯಲ್ಲಿ ಬಂದ ಬೌಲರ್‌ಗಳು ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯಲಿಲ್ಲ. ಇಂಗ್ಲೆಂಡ್ ಪರ ಡಾಮ್ ಬೆಸ್ 4 ವಿಕೆಟ್ ಪಡೆದರೆ. ಆಂಡರ್ಸನ್, ಆರ್ಚರ್ ಹಾಗೂ ಲೀಚ್ ತಲಾ 2 ವಿಕೆಟ್ ಪಡೆದರು.

Exit mobile version