2047ಕ್ಕೆ ಭಾರತ ಸೂಪರ್‌ ಪವರ್‌ ರಾಷ್ಟ್ರವಾಗಿ ಹೊರಹೊಮ್ಮುತ್ತದೆ; ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್

ಬೆಂಗಳೂರು, ಆ. 16: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕಳೆದ 7 ವರ್ಷಗಳಲ್ಲಿ ಭಾರತವು ಅದ್ವಿತೀಯ ಸಾಧನೆ ಮಾಡಿದೆ. ಇನ್ನು ಮುಂದಿನ 25 ವರ್ಷಗಳ ಕಾಲ ಬಿಜೆಪಿ ಆಡಳಿತದಲ್ಲಿ ಇರಬೇಕು. ಆಗ 2047ರಲ್ಲಿ ದೇಶವು ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅಭಿಪ್ರಾಯಪಟ್ಟರು.

ಹುಬ್ಬಳ್ಳಿ ಜನಾಶೀರ್ವಾದ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ, ಆಯುಷ್ಮಾನ್ ಭಾರತ್, ಜಲಜೀವನ್ ಮಿಷನ್, ಡಿಜಿಟಲ್ ಗ್ರಾಮ, ಅಂತ್ಯೋದಯ- ಇವೆಲ್ಲವೂ ದೇಶದ ಕಟ್ಟಕಡೆಯ ಮನುಷ್ಯರ ಕಲ್ಯಾಣಕ್ಕಾಗಿ ರೂಪಿಸಲ್ಪಟ್ಟಿವೆ. ಬಿಜೆಪಿ ಅತ್ಯುತ್ತಮ ಆಡಳಿತ ನೀಡುತ್ತಿದ್ದು, ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದೆ ಎಂದರು.

ಕರ್ನಾಟಕದ ಬಿಜೆಪಿ ಸರಕಾರವು ಕೋವಿಡ್, ನೆರೆಯಂಥ ಸವಾಲುಗಳನ್ನು ಎದುರಿಸಿದರೂ ಅತ್ಯುತ್ತಮವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಜೊತೆ ಸಮನ್ವಯದೊಂದಿಗೆ ದೇಶ ಮತ್ತು ನಾಡಿನ ಅಭಿವೃದ್ಧಿಗೆ ಶ್ರಮಿಸುವುದಾಗಿ ಅವರು ತಿಳಿಸಿದರು.

ಉತ್ತರ ಕರ್ನಾಟಕದ ಹುಬ್ಬಳ್ಳಿ, ಧಾರವಾಡ ಸೇರಿದಂತೆ ವಿವಿಧೆಡೆ ಸಾಫ್ಟ್ ವೇರ್ ಉದ್ಯಮ ಸ್ಥಾಪಿಸಲಾಗುವುದು. ಟೆಕ್ಕಿಗಳ ಮನವಿಗೆ ಪೂರಕವಾಗಿ ಸ್ಪಂದಿಸುವುದಾಗಿ ತಿಳಿಸಿದರು. ಹುಬ್ಬಳ್ಳಿ- ಧಾರವಾಡದಲ್ಲಿ ತಂತ್ರಜ್ಞಾನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಕೋವಿಡ್ ನಂತರ ವರ್ಕ್ ಫ್ರಂ ಹೋಂ ಹೆಚ್ಚಾಗುತ್ತಿದೆ. ಇದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಡಲಾಗುವುದು. ಇಂಟರ್ನೆಟ್ ಸೌಲಭ್ಯ ನೀಡಲಾಗುವುದು. ಇದಕ್ಕೆ ನಿಮ್ಮಲ್ಲರ ಸಹಕಾರ ಬೇಕು ಎಂದು ತಿಳಿಸಿದರು.

ಮತದಾರರ ಮನೆ ಬಾಗಿಲಿಗೆ ಯಾತ್ರೆ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಯಾತ್ರೆ ಉದ್ಘಾಟನೆ ವೇಳೆ ಮಾತನಾಡಿ, ಬಿಜೆಪಿ ಗೆದ್ದ ಬಳಿಕವೂ ಜನಾಶೀರ್ವಾದ ಕೇಳುತ್ತಿದೆ. ಇದು ಕೇವಲ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ನುಡಿದರು. ಚುನಾವಣೆ ಬಂದಾಗ ಮತದಾರ ದೇವರನ್ನು ಸ್ಮರಿಸುತ್ತೇವೆ. ಆದರೆ, ಬಹುತೇಕ ಎಲ್ಲ ಪಕ್ಷಗಳೂ ಗೆದ್ದ ಮೇಲೆ “ನೀನ್ಯಾಕೋ ನಿನ್ನ ಹಂಗ್ಯಾಕೋ. ನಿನ್ನ ನಾಮದ ಬಲವೊಂದಿದ್ದರೆ ಸಾಕೋ”ಎನ್ನುವ ಕಾಲಘಟ್ಟದಲ್ಲಿದೆ ಎಂದರು.

ರಾಜ್ಯದಲ್ಲಿ ಜೈಲಿಗೆ ಹೋದಾಗ ಮೆರವಣಿಗೆ, ಜೈಲಿನಿಂದ ಬಂದಾಗ ಮೆರವಣಿಗೆ ಕಾಣುತ್ತಿದೆ. ದೊಡ್ಡ ಕ್ರೇನ್ ಮೂಲಕ ಹಾರ ಹಾಕಿದ್ದನ್ನು ಕಂಡಿದ್ದೇವೆ. ಆದರೆ, ಇದು ಅಂಥ ಯಾತ್ರೆಯಲ್ಲ. ಇದು ಮತದಾರರ ಮನೆ ಬಾಗಿಲಿಗೆ ಯಾತ್ರೆ ಎಂದು ವಿವರಿಸಿದರು.

ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ಹಾಗೂ ರಾಜ್ಯ ಕಾರ್ಯದರ್ಶಿ ಕೇಶವಪ್ರಸಾದ್, ಜಿಲ್ಲೆಯ ಶಾಸಕರು, ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.

Exit mobile version