ಅಂತರ್ಧರ್ಮೀಯ `ಲವ್ ವಾರ್’

ಆ ಪ್ರೀತಿ ನಡೆಯುವುದು ಎರಡು ಧರ್ಮಗಳ ಯುವಕ ಯುವತಿಯ ಮಧ್ಯೆ. ಆದರೆ ಅದರ ನಡುವೆ ಯುದ್ಧ ನಡೆಯುವುದು ಎಲ್ಲಿ? ಅದು ಕೂಡ ಯುವಕ ಯುವತಿಯ ನಡುವೆ ಮಾತ್ರ ಎನ್ನುವುದು `ಲವ್ ವಾರ್’ ಚಿತ್ರದ ನಿರ್ದೇಶಕ ಎಸ್ ಮಂಜು ಅವರ ಅಭಿಪ್ರಾಯ. ಇದೊಂದು ನವಿರಾದ ಪ್ರೇಮ ಕತೆಯಾಗಿದ್ದು, ಶೀರ್ಷಿಕೆ ಹೇಳುವಂತೆ ಇಬ್ಬರು ಪ್ರೇಮಿಗಳ ಕಿತ್ತಾಟ, ಕುಟುಂಬದ ಜೊತೆಗಿನ ಅಂಶಗಳು ಚಿತ್ರದಲ್ಲಿರಲಿವೆ ಎನ್ನಲಾಗಿದೆ.

ಚಿತ್ರದಲ್ಲಿ ನಾಯಕಿ ಹಿಂದೂ ಧರ್ಮದ ಹುಡುಗಿಯಾಗಿರುತ್ತಾಳೆ. ಆಕೆಯ ಪ್ರಿಯಕರ ಇಸ್ಲಾಂ ಧರ್ಮದವನಾಗಿರುತ್ತಾನೆ. ಆದರೆ ಹೀಗೆ ಧರ್ಮಗಳ ನಡುವಿನ ಕತೆ ಆಯ್ಕೆ ಮಾಡಿಕೊಂಡಿರುವುದಕ್ಕೆ ವಿಶೇಷ ಕಾರಣಗಳೇನು ಇಲ್ಲ. ಇದರಲ್ಲಿ ಪ್ರೇಮಕತೆಯೇ ಮುಖ್ಯವಾಗಿರುತ್ತದೆ ಎನ್ನುತ್ತಾರೆ ಚಿತ್ರದ ನಿರ್ಮಾಪಕ ಇಮ್ರಾನ್ ಆರಿಫ್ ಪಾಶಾ. ಎಸ್‌ ಕೆ ಎಫ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ನಿರ್ದೇಶನದೊಂದಿಗೆ ಚಿತ್ರಕತೆಯ ಜವಾಬ್ದಾರಿಯನ್ನು ಕೂಡ ಎಸ್ ಮಂಜು ಪ್ರೀತಮ್ ಅವರೇ ವಹಿಸಿಕೊಂಡಿದ್ದಾರೆ. ಚಿತ್ರದ ನಾಯಕ ಸಾಹಿಲ್ ಖಾನ್ ಅವರಿಗೆ ಇದು ಮೊದಲ ಸಿನಿಮಾ. ನಾಯಕಿಯಾಗಿ ನವನಟಿ ಪಾಯಲ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಮರಾಠಿ ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿರುವ ಪಾಯಲ್ ಅವರಿಗೆ ಇದು ಕನ್ನಡದ ಮೊದಲ ಚಿತ್ರ. ಪಾತ್ರಕ್ಕಾಗಿ ಕನ್ನಡ ಕೋಚಿಂಗ್ ಕ್ಲಾಸ್ ಸೇರಿಕೊಂಡಿದ್ದು ಮುಂದೆ ಚೆನ್ನಾಗಿ ಮಾತನಾಡುವ ಭರವಸೆ ವ್ಯಕ್ತಪಡಿಸಿದ್ದಾರೆ.

ಸಿನಿಮಾದ ಚಿತ್ರೀಕರಣವು ಚಿತ್ರದುರ್ಗ, ಚಿಕ್ಕಮಗಳೂರು, ಮಡಕೇರಿ, ಗೋವ ಮತ್ತು ಮಹಾರಾಷ್ಟ್ರಗಳಲ್ಲಿ ನೆರವೇರಲಿದೆ. ಸಾಧುಕೋಕಿಲ, ರವಿಶಂಕರ್ ಉಳಿದಂತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಿಂದ ಒಬ್ಬ ಕಲಾವಿದ ನಟಿಸಲಿದ್ದಾರೆ. ಯಾಕೆಂದರೆ ಚಿತ್ರವು ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಸಿದ್ದಗೊಳ್ಳುತ್ತಿರುವುದೇ ಅದಕ್ಕೆ ಕಾರಣ. ಸಂಗೀತ ನಿರ್ದೇಶಕ ಆರೋನ್ ಕಾರ್ತಿಕ್ ಮಾತನಾಡಿ, ಚಿತ್ರದಲ್ಲಿ ನಾಲ್ಕು ಹಾಡುಗಳಿರುವುದಾಗಿ ತಿಳಿಸಿದರು. ಚಿತ್ರದ ಸುದ್ದಿಗೋಷ್ಠಿಯಲ್ಲಿ ತಂಡದ ಜೊತೆಗೆ ನಟ ಎಸ್ಕಾರ್ಟ್ ಶ್ರೀನಿವಾಸ್, `ಕರಿಯ’ ಖ್ಯಾತಿಯ ನೃತ್ಯ ನಿರ್ದೇಶಕ ನಂದ, ಸಾಹಸ ಸಂಯೋಜಕ ಜಾನಿ ಮಾಸ್ಟರ್ ಮೊದಲಾದವರು ಉಪಸ್ಥಿತರಿದ್ದರು.

Exit mobile version