ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿ: ಕುಮಾರಸ್ವಾಮಿ

ಬೆಂಗಳೂರು, ಫೆ. 14: ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು. ಮಸ್ಕಿಯಲ್ಲಿ ಪಕ್ಷದ ಶಕ್ತಿ ಕಡಿಮೆ ಇರಬಹುದು, ಸಿಂದಗಿಯಲ್ಲಿ ಅಭ್ಯರ್ಥಿ ಹಾಕ್ತೇವೆ. ಹಣದ ಕೊರತೆ ಇರಬಹುದು ಸಾಲ ಮಾಡಿ ಪಕ್ಷ ಉಳಿಸಬೇಕೆಂದು ದೇವೇಗೌಡರು ಸಲಹೆ ಕೊಟ್ಟಿದ್ದಾರೆ ಎಂದು ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ದೇವೇಗೌಡ ಅವರ ಸುದೀರ್ಘ ಜೀವನದ ಅನುಭವ ಬಳಸಿಕೊಂಡು ನಾವು ಹೋಗ್ತೇವೆ. ಯಾವ ಪಕ್ಷದ ಅಡಿಯಾಳಾಗಿ ನಾವು ಇರೋದಿಲ್ಲ. ಈ ಪಕ್ಷದ ಶಕ್ತಿ ಏನೆಂದು ಹಲವು ಬಾರಿ ಕಾರ್ಯಕರ್ತರು ತೋರಿಸಿದ್ದಾರೆ. ಹೀಗಾಗಿ ಮಸ್ಕಿ, ಸಿಂದಗಿ, ಬಸವಕಲ್ಯಾಣ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸಲಿದೆ. ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ನಿಂದ ಅಭ್ಯರ್ಥಿ ಹಾಕುತ್ತೇವೆ ಎಂದು ಹೆಚ್.ಡಿ ಕುಮಾರಸ್ವಾಮಿ ಘೋಷಣೆ ಮಾಡಿದರು.

ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಅವರು, ಜೆಡಿಎಸ್ ಅಭ್ಯರ್ಥಿ ಹಾಕಲ್ಲ ಅಂದರೇ ಅವರಿಗೆ ಯಾಕೆ ಬೇಸರ…? ಜೆಡಿಎಸ್ ಪಕ್ಷವೇ ಅಲ್ಲ ಅಂದೋರಿಗೆ ಯಾಕೆ ತಲೆ ಬಿಸಿ. ಜೆಡಿಎಸ್ ಅನ್ನ ಪಕ್ಷವೆ ಅಲ್ಲ ಎನ್ನುತ್ತಿದ್ದವರು ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಹಾಕಲಿಲ್ಲ ಎಂದರೇ ಯಾಕೆ ತಲೆಬಿಸಿ ಮಾಡಿಕೊಳ್ಳಬೇಕು ಎಂದು ಸಿದ್ಧರಾಮಯ್ಯಗೆ ಚಾಟಿ ಬೀಸಿದರು.

ನಾನು ಬಿಜೆಪಿ ಬಗ್ಗೆ ಮೃದು ಧೋರಣೆ ತಾಳಿಲ್ಲ. ಯಾವುದೇ ಕಾರಣಕ್ಕೂ ಯಾವುದೇ ಪಕ್ಷದ ಜೊತೆ ರಾಜಿ ಮಾಡಿಕೊಂಡಿಲ್ಲ. ಉಪಚುನಾವಣೆಯಲ್ಲಿ ಯಾವುದೇ ಪಕ್ಷದ ಜೊತೆ ಹೊಂದಾಣಿಕೆಯ ಪ್ರಶ್ನೆಯೇ ಇಲ್ಲ. ವಿಧಾನಸಭೆಯಲ್ಲಿ ಸಿದ್ದರಾಮಯ್ಯನವರು ಯಡಿಯೂರಪ್ಪ ವಿರುದ್ಧದ ಪ್ರಕರಣಗಳ ಬಗ್ಗೆ ಮಾತಾಡಿದ್ರು. ಯಡಿಯೂರಪ್ಪ ಎದ್ದು ನಿಂತು ರೀಡೂ ಪ್ರಕರಣವನ್ನು ಪ್ರಸ್ತಾಪ ಮಾಡುತ್ತಿದ್ದಂತೆ ಸಿದ್ದರಾಮಯ್ಯ ಬಾಯಿ ಮುಚ್ಕೊಂಡು ಸುಮ್ಮನೆ ಕುಳಿತ್ಕೊಂಡ್ರು. ಇದು ಇವರಿಬ್ಬರ ರಾಜಕಾರಣ ಎಂದು ಟೀಕಿಸಿದರು.

ಯಡಿಯೂರಪ್ಪ ಬಗ್ಗೆ ನನಗೆ ಯಾವುದೇ ವೈಯಕ್ತಿಕ ದ್ವೇಷ ಇಲ್ಲ. ವೀರಶೈವ ಸಮುದಾಯಕ್ಕೆ ಇದನ್ನ ಸ್ಪಷ್ಟವಾಗಿ ಹೇಳುತ್ತೇನೆ. ಬಿಜೆಪಿಯ ಭ್ರಷ್ಟ ಆಡಳಿತದ ಬಗ್ಗೆ ಮೊದಲು ಹೋರಾಟ ಮಾಡಿದ್ದು ಜೆಡಿಎಸ್ ಎರಡು ಸೂಟ್ ಕೇಸ್ ಗಳಲ್ಲಿ ದಾಖಲೆಗಳನ್ನು ವಿಧಾನಸೌಧಕ್ಕೆ ಕೊಂಡೊಯ್ದು ‌ಬಿಡುಗಡೆ ಮಾಡಿದ್ದೆವು. ವೀರಶೈವ ಸಮುದಾಯಕ್ಕೆ ನಾನು ಈ ವೇದಿಕೆಯಲ್ಲಿ ತಿಳಿಸೋಕೆ ಬಯಸ್ತೇನೆ. ಯಡಿಯೂರಪ್ಪ ಅವರಿಗೂ ನನಗೂ ವೈಯಕ್ತಿಕ ದ್ವೇಷ ಇಲ್ಲ. ಆದರೆ ಯಡಿಯೂರಪ್ಪರ ಹಿಂದಿನ ಸರ್ಕಾರದಲ್ಲಿ ಲೂಟಿ‌ ನಡೀತಿತ್ತು. ರಾಜ್ಯದ ಸಂಪತ್ತು ಲೂಟಿ ಹೊಡೆಯುತ್ತಿದ್ದಾಗ ಧ್ವನಿ ಎತ್ತಿದ್ದೆ. ಅಂದು ಇದೇ ದಾಖಲೆ ಬಿಡುಗಡೆ ಮಾಡಿದ್ದು ಎಂದು ಸ್ಪಷ್ಟಪಡಿಸಿದರು.

Exit mobile version