ಬಂಧನ ಭೀತಿ: ನಾಪತ್ತೆಯಾದ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್

Ranchi: ಮಹತ್ವದ ಬೆಳವಣಿಗೆಯಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ (Hemanth Soren) ಅವರು ನಾಪತ್ತೆಯಾಗಿದ್ದು, ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಅವರ ಪತ್ತೆಗಾಗಿ ತೀವ್ರ ಶೋಧ ನಡೆಸಿದ್ದಾರೆ. ಅಕ್ರಮ ಭೂ ಹಗರಣ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಅನೇಕ ಬಾರಿ ಜಾರಿ ನಿರ್ದೇಶನಾಲಯ ನೀಡಿದ್ದ ವಿಚಾರಣೆಗೆ ಗೈರಾಗಿದ್ದ ಸೊರೇನ್ ಅವರಿಗೆ ಇದೀಗ ಬಂಧನ ಭೀತಿ ಎದುರಾಗಿದೆ.

ಇನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದೆಹಲಿಯಲ್ಲಿರುವ (Delhi) ಹೇಮಂತ್ ಸೊರೇನ್ ಅವರ ಅಧಿಕೃತ ನಿವಾಸದ ಮೇಲೆ ದಾಳಿ ನಡೆಸಿದ್ದು, ಶೋಧಕಾರ್ಯ ನಡೆಸಿತಾದರೂ ಹೇಮಂತ್ ಸೊರೇನ್ ಅವರ ವಿಚಾರಣೆ ನಡೆಸಲು ಸಾಧ್ಯವಾಗಿಲ್ಲ. ಆದರೆ ಅವರ ಮನೆಯಲ್ಲಿ ಎರಡು BMW ಐಷಾರಾಮಿ ಕಾರುಗಳು, 35 ಲಕ್ಷ ನಗದು, ಕೆಲವು ಮಹತ್ವದ ದಾಖಲೆಗಳು ಪತ್ತೆಯಾಗಿವೆ ಎನ್ನಲಾಗಿದೆ.

ಜಾರ್ಖಂಡ್ ಮುಕ್ತಿ ಮೋರ್ಚಾ’ದ (JMM) ನಾಯಕ ಹಾಗೂ ಜಾರ್ಖಂಡ್ ಸಿಎಂ ಆಗಿರುವ ಸೊರೇನ್ ಅವರು ಜನವರಿ 27ರಂದು ದೆಹಲಿಗೆ ಹೋಗಿದ್ದರು. ಆದರೆ ಇದೀಗ ದಿಢೀರ್ನೆ ತಮ್ಮ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಅವರು ಅಜ್ಞಾತ ಸ್ಥಳ ಸೇರಿಕೊಂಡಿದ್ದಾರೆಂದು ಏಂದು ಮೂಲಗಳು ಹೇಳಿವೆ. ಈ ಮಧ್ಯೆ, ಜಾರಿ ನಿರ್ದೇಶನಾಲಯದ ಕಚೇರಿಗೆ ಇಮೇಲ್ ಮಾಡಿ, ಜನವರಿ (January) 31ರಂದು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ಹೇಮಂತ್ ಸೊರೇನ್ ಅವರು ಈಗಾಗಲೇ ಸುಮಾರು 9 ಬಾರಿ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಗೈರಾಗಿದ್ದಾರೆಂದು ಇಡಿ ಮೂಲಗಳು ಹೇಳಿವೆ. ಈಗಾಗಲೇ ಜಾರಿ ನಿರ್ದೇಶನಾಲಯದ ತಂಡವು ಐಎಎಸ್ (IAS) ಅಧಿಕಾರಿ ಛಾವ್ವಿ ರಾಜನ್ ಸೇರಿದಂತೆ 14 ಜನರನ್ನು ಬಂಧಿಸಿ ವಿಚಾರಣೆ ನಡೆಸಿದೆ. ಈ ಪ್ರಕರಣದಲ್ಲಿ ಹೇಮಂತ್ ಸೊರೇನ್ ಅವರು ಪ್ರಮುಖ ಆರೋಪಿಯಾಗಿದ್ದಾರೆ.

ಜಾರ್ಖಂಡ್ (Jharkhand) ರಾಜಧಾನಿ ರಾಂಚಿಯಲ್ಲಿ ಸಿಎಂ ಹೇಮಂತ್ ಸೊರೇನ್ ಅವರ ಮೇಲಿನ ದಾಳಿಯನ್ನು ಖಂಡಿಸಿ JMM ಕಾರ್ಯಕರ್ತರು ಪ್ರತಿಭಟಣೆ ನಡೆಸುತ್ತಿದ್ದಾರೆ. ಹೀಗಾಗಿ ರಾಜಭವನ ಮತ್ತು ಮುಖ್ಯಮಂತ್ರಿಗಳ ಕಚೇರಿ, ನಿವಾಸ ಹಾಗೂ ಎಲ್ಲ ಕೇಂದ್ರ ಸರಕಾರಿ ಸಂಸ್ಥೆಗಳಿಗೆ ಭದ್ರತೆ ನೀಡಲಾಗಿದೆ. ಇನ್ನೊಂದೆಡೆ ತಮ್ಮ ಮೇಲಿನ ದಾಳಿಯ ಕುರಿತು ಪ್ರತಿಕ್ರಿಯೆ ನೀಡಿರುವ ಹೇಮಂತ್ ಸೊರೇನ್ ಅವರು “ನನ್ನ ವರ್ಚಸ್ಸಿಗೆ ಮಸಿ ಬಳಿಯಲು ಜಾರಿ ನಿರ್ದೇಶನಾಲಯ ಪ್ರಯತ್ನಿಸುತ್ತಿದೆ. ಸುಳ್ಳು ಆರೋಪಗಳನ್ನು ಹೊರಿಸಿ, ವಿಚಾರಣೆ ನೆಪದಲ್ಲಿ ನನ್ನನ್ನು ಹಿಂಸಿಸುತ್ತಿದೆ. ಇದೊಂದು ರಾಜಕೀಯ ಪ್ರೇರಿತ ದಾಳಿಯಾಗಿದೆ” ಎಂದು ಆರೋಪಿಸಿದ್ದಾರೆ.

Exit mobile version