ತಮಿಳುನಾಡಿನಲ್ಲಿ ಚುನಾವಣೆ ಮುನ್ನ ಹಣ ಹಂಚಲಾಗಿದೆ: ಕಮಲ್ ಹಾಸನ್ ಆರೋಪ

ಕೊಯಮತ್ತೂರು, ಏ. 06: ತಮಿಳುನಾಡು ವಿಧಾನಸಭೆ ಚುನಾವಣೆಗೆ ಮುನ್ನ ಸೋಮವಾರ ರಾತ್ರಿ ರಾಜಕೀಯ ಪಕ್ಷಗಳು ಜನರಿಗೆ ಹಣ ಹಂಚಿವೆ ಎಂದು ಮಕ್ಕಳ್ ನೀಧಿ ಮಯ್ಯಂ (MNM) ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಆರೋಪಿಸಿದ್ದಾರೆ. ಈ ಬಗ್ಗೆ ಅವರು ಕೊಯಮತ್ತೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಅಧಿಕಾರಿಯವರಿಗೆ ದೂರು ನೀಡಿದ್ದಾರೆ. ಕಮಲ್ ಹಾಸನ್ ಇದೇ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ನಾವು ಕೆಲವರನ್ನು ಹಿಡಿದಿದ್ದೇವೆ, ಸಾಕ್ಷ್ಯಗಳು ಇವೆ. ಚುನಾವಣಾ ಆಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಎನ್ಡಿ​ಟಿವಿ ಜತೆ ಮಾತನಾಡಿದ ಕಮಲ್ ಹೇಳಿದ್ದಾರೆ. ಈ ಕೃತ್ಯವನ್ನು ಖಂಡಿಸಿ ನಾನು ಪ್ರತಿಭಟನೆ ನಡೆಸುವುದಾಗಲೀ, ಮತದಾನ ಪ್ರಕ್ರಿಯೆಗೆ ತಡೆಯೊಡ್ಡುವುದಾಗಲೀ ಮಾಡುವುದಿಲ್ಲ. ನಾನು ಇಲ್ಲಿ ದೂರು ನೀಡಲು ಬಂದಿದ್ದೇನೆ ಎಂದಿದ್ದಾರೆ ಕಮಲ್.

ಚುನಾವಣಾ ಫಲಿತಾಂಶದ ಬಗ್ಗೆ ನಾನು ಧನಾತ್ಮಕವಾಗಿ ಚಿಂತಿಸುತ್ತಿದ್ದೇನೆ. ನಾನು ಕಮಲ್ ಹಾಸನ್ ಜತೆಗೆ ಬಂದಿದ್ದೇನೆ. ನಾನು ಅವರ ಮಗಳು, ಹಾಗಾಗಿ ಅವರ ಬೆಂಬಲಕ್ಕೆ ನಿಂತಿದ್ದೇನೆ. ಎಲ್ಲವೂ ಸರಿಹೋಗಲಿ ಎಂದು ಆಶಿಸುತ್ತೇನೆ ಎಂದು ಶ್ರುತಿ ಹಾಸನ್ ಪ್ರತಿಕ್ರಿಯಿಸಿದ್ದಾರೆ.

ತಮಿಳುನಾಡಿನ 234 ಚುನಾವಣಾ ಕ್ಷೇತ್ರಗಳಿಗೆ ಚುನಾವಣೆಗೆ ಒಂದೇ ಹಂತದ ಮತದಾನ ನಡೆಯುತ್ತಿದ್ದು ಯಾವುದೇ ಅಹಿತಕರ ಘಟನೆಗಳು ವರದಿ ಆಗಿಲ್ಲ ಎಂದು ತಮಿಳುನಾಡಿನ ಮುಖ್ಯ ಚುನಾವಣಾಧಿಕಾರಿ ಸತ್ಯಬ್ರತ ಸಹೋ ಹೇಳಿದ್ದಾರೆ.

Exit mobile version