ಕನ್ನಡ ಸಿನಿಮಾಗಳಿಗೆ ಮಲ್ಟಿಪ್ಲೆಕ್ಸ್ಗಳ ಧೋರಣೆ ; ಕರ್ನಾಟಕದಲ್ಲಿ ಕನ್ನಡ ಸಿನಿಮಾಗಿಂತ ಹಿಂದಿ ಸಿನಿಮಾಗಳಿಗೆ ಹೆಚ್ಚು ಆದ್ಯತೆ!

multiplex

ರಾಜ್ಯದ ಚಿತ್ರಮಂದಿರಗಳಲ್ಲಿ ಪ್ರತಿವಾರ ಸಾಲು ಸಾಲು ಕನ್ನಡ ಸಿನಿಮಾಗಳು ತೆರೆಕಾಣುತ್ತಿವೆ.

ಒಂದೆಡೆ ಕನ್ನಡ ಸಿನಿಮಾಗಳು ಯಶಸ್ವಿಯಾಗಿ ತೆರೆಕಾಣುತ್ತಿರುವ ಸಂಗತಿ ಖುಷಿ ತಂದರೆ, ಮತ್ತೊಂದೆಡೆ ಕನ್ನಡ ಸಿನಿಮಾಗಳು ಉತ್ತಮ ಅಭಿಪ್ರಾಯಗಳನ್ನು ಪಡೆದು, ಜನರು ಚಿತ್ರಮಂದಿರಕ್ಕೆ ಬರಲು ಸಜ್ಜಾದ ಸಮಯಕ್ಕೆ ಮಲ್ಟಿಪ್ಲೆಕ್ಸ್ ಗಳು ಕನ್ನಡ ಸಿನಿಮಾಗಳಿಗೆ ಹೆಚ್ಚು ಶೋ ಕೊಡದೆ ಅನ್ಯಾಯ ಮಾಡುತ್ತಿದ್ದಾರೆ!

ಹೌದು, ಕಳೆದ ವಾರವಷ್ಟೇ 4 ಕನ್ನಡ ಸಿನಿಮಾಗಳು ಏಕಕಾಲಕ್ಕೆ ತೆರೆಕಂಡಿದೆ. ಆದರೆ ಈ ಪೈಕಿ ಯಾವುದೇ ಸಿನಿಮಾಗಳಿಗೂ ಒಂದು ಶೋ ಬಿಟ್ಟರೆ ಹೆಚ್ಚು ಶೋ ಕೊಡುವಲ್ಲಿ ಮಲ್ಟಿಪ್ಲೆಕ್ಸ್‍ಗಳು ಧೋರಣೆ ಮಾಡುತ್ತಿವೆ.

ಲವ್ ಮಾಕ್ಟೇಲ್ 2, ಏಕ್ ಲವ್ ಯಾ ಸಿನಿಮಾಗಳು ತೆರೆಕಂಡು ಉತ್ತಮವಾಗಿ ಪ್ರದರ್ಶನ ಕಾಣುತ್ತಿದ್ದರೂ ಒಂದೆರೆಡು ಶೋ ಹೊರೆತುಪಡಿಸಿದರೆ ಹೆಚ್ಚು ಶೋ ಕೊಡುತ್ತಿಲ್ಲ! ಕೋವಿಡ್ ಲಾಕ್‍ಡೌನ್ ಹೊಡೆತಕ್ಕೆ ಸಿಲುಕಿದ್ದ ಚಿತ್ರತಂಡ, ಈಗ ಮಂದಗತಿಯಲ್ಲಿ ಚೇತರಿಸಿಕೊಳ್ಳುತ್ತಿದೆ. ಇಂಥ ಸಮಯದಲ್ಲಿ ಜನರಿಗೆ ಚಿತ್ರಮಂದಿರದಲ್ಲಿ ಮನರಂಜಿಸಲು ಕನ್ನಡ ಸಿನಿಮಾಗಳು ಪ್ರೇಕ್ಷಕರ ಮುಂದೆ ಹಾಜರಾಗಲು ಚಿತ್ರಮಂದಿರಕ್ಕೆ ಪ್ರವೇಶಿಸುತ್ತಿದ್ದರೆ, ಇತ್ತ ಮಲ್ಟಿಪ್ಲೆಕ್ಸ್ ಗಳು ತಮ್ಮ ವರಸೆಯನ್ನು ತೋರಿಸುತ್ತಿದ್ದಾರೆ!

ಕನ್ನಡ ಚಿತ್ರಗಳನ್ನು ಪ್ರೇಕ್ಷಕರು ನೋಡಿ ಚೆನ್ನಾಗಿಲ್ಲ, ಈ ಸಿನಿಮಾ ನೋಡುವಂಥದ್ದಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರೆ ಅಂಥ ಸಿನಿಮಾಗಳಿಗೆ ಒಂದು ಶೋ ಕೊಡುವುದು ಅಥವಾ ಕೊಡದೆ ಇರುವುದು ಒಪ್ಪುವಂತ ವಿಷಯ. ಆದರೆ, ಒಳ್ಳೆ ರೇಟಿಂಗ್ ಪಡೆದು, ಜನಾಭಿಪ್ರಾಯ ಆಯಾ ಸಿನಿಮಾ ಪರವಿದ್ದರೂ ಕೂಡ ಆ ಸಿನಿಮಾಗಳಿಗೆ ಹೆಚ್ಚು ಶೋ ಕೊಡದೆ, ಸಿನಿಮಾವನ್ನು ಚಿತ್ರಮಂದಿರದಿಂದ ಹೊರತೆಗೆಯುವ ಪ್ರಯತ್ನ ಅಕ್ಷಮ್ಯ ತಪ್ಪು! ಇದೇ ಸಾಲಿನಲ್ಲಿ ಹಿಂದಿ ಸಿನಿಮಾಗಳು ಯಾಕಿಲ್ಲಾ? ಹಿಂದಿ ಭಾಷೆಯ ಗಂಗೂಬಾಯಿ ಕಠಿಯಾವಾಡಿ, ಜೆಹಂದ್ ಜೊತೆಗೆ ಇನ್ನು ಬಿಡುಡೆಯಾಗದ ರಾಧೆ ಶ್ಯಾಮ್ ಸಿನಿಮಾಗಳಿಗೆ ಬಿಡುಡೆಗೂ ಮುನ್ನವೇ ಒಂದಲ್ಲ ಎರಡು ಶೋಗಳನ್ನು ನೀಡುತ್ತಾರೆ ಈ ಮಲ್ಟಿಪ್ಲೆಕ್ಸ್ ನವರು.

ಕನ್ನಡ ಸಿನಿಮಾಗಳಿಗೆ ಒಂದು ಶೋ ಕೊಟ್ಟು  ಮೋಸ ಮಾಡುತ್ತಾರೆ. ಹೇಗೆ ಅಂತೀರಾ? ಕನ್ನಡ ಸಿನಿ ಪ್ರೇಕ್ಷಕರು ವಾರ ಪೂರ ತಮ್ಮ ಕೆಲಸದಲ್ಲಿ ನಿರತರಾಗಿರುತ್ತಾರೆ. ಈ ಮಧ್ಯೆ ಹಲವರು ತಮ್ಮ ಇಂದಿನ ಕೆಲಸ ಮುಗಿಸಿಕೊಂಡು 7:30, 9:30 ಶೋಗೆ ಹೋಗೊಣ ಎಂದು ಯೋಚಿಸಿ, ಬುಕ್ ಮೈ ಶೋ ಅಥವಾ ಮಲ್ಟಿಪ್ಲೆಕ್ಸ್ಗೆ ಹೋದರೆ ಅಲ್ಲಿ ಆ ಸಮಯಕ್ಕೆ ಯಾವುದೇ ಸಿನಿಮಾ ಇರುವುದಿಲ್ಲ! ಕನ್ನಡ ಸಿನಿಮಾಗಳಿಗೆ ಕೇವಲ 6 ಗಂಟೆ ಅಥವಾ 6:30 ಸಮಯಕ್ಕೆ ಒಂದು ಶೋ ಬಿಟ್ಟರೆ ನೈಟ್ ಶೋ ಕೊಡುವುದಿಲ್ಲ! ಆದರೆ, ಇದೇ ಹಿಂದಿ ಸಿನಿಮಾಗಳಾದ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾಗಳಿಗೆ ಬುಕ್ ಮೈ ಶೋ ಆಪ್ ನಲ್ಲಿ ಚೆಕ್ ಮಾಡಿದರೆ ರಾತ್ರಿ ಶೋಗಳಿಗೆ ಟಿಕೆಟ್ ಲಭ್ಯವಿರುತ್ತದೆ. ಒಂದಲ್ಲ, ಎರಡು ಶೋಗಳು ವೀಕ್ಷಿಸಲು ಲಭ್ಯವಿರುತ್ತೆ. ಅದೇ ಕನ್ನಡ ಸಿನಿಮಾಗಳಿಗೆ ಅವಕಾಶವಿಲ್ಲ! 

ರೇಟಿಂಗ್ ಜೊತೆಗೆ ಸಿನಿ ಪ್ರೇಕ್ಷಕರಿಂದ ಆಕ್ಯುಪೆನ್ಸಿ ಹೆಚ್ಚಿನ ಸಂಖ್ಯೆಯಲ್ಲಿದ್ದರು ಕೂಡ ಅವಕಾಶ ಕೊಡುವುದಿಲ್ಲ! ಕನ್ನಡ ಸಿನಿಮಾಗಳ ಮೇಲೆ ಮಲ್ಟಿಪ್ಲೆಕ್ಸ್ ಗಳ ಈ ನಡೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ! ಇತ್ತೀಚಿಗೆ ಕನ್ನಡ ಸಿನಿಮಾಗಳಲ್ಲಿ ಜನರಿಂದ ಉತ್ತಮ ಅಭಿಪ್ರಾಯದ ಜೊತೆಗೆ ಸಾಕಷ್ಟು ಒಳ್ಳೆಯ ವಿಮರ್ಶೆಯನ್ನು ಪಡೆದುಕೊಳ್ಳುತ್ತಿರುವ ನಟ ಪ್ರದೀಪ್ ನಟನೆಯ ಯೆಲ್ಲೋ ಬೋರ್ಡ್ ಸಿನಿಮಾಗೂ ಕೂಡ ಇದೇ ಅನ್ಯಾಯ ಎದುರಾಗಿದೆ. ಈ ಬಗ್ಗೆ ನಟ ಪ್ರದೀಪ್ ಅವರು ತಮ್ಮ ಸಾಮಾಜಿಕ ಜಾಲತಾಣದ ಫೇಸ್ಬುಕ್ ಖಾತೆಯಲ್ಲಿ ಲೈವ್ ಬಂದು ತಮ್ಮ ಸಿನಿಮಾಗೆ, ಮುಖ್ಯವಾಗಿ ಕನ್ನಡ ಸಿನಿಮಾಗಳಿಗೆ ಮಲ್ಟಿಪ್ಲೆಕ್ಸ್ಗಳು ಮಾಡುತ್ತಿರುವ ಧೋರಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಲ್ಟಿಪ್ಲೆಕ್ಸ್ಗಳು ಎಚ್ಚೆತ್ತುಕೊಳ್ಳಲಿಲ್ಲ ಎಂದರೆ ಮುಂದೆ ಕನ್ನಡ ಸಿನಿ ಪ್ರೇಕ್ಷಕರು ಖಂಡಿತ ಸುಮ್ಮನಿರುವುದಿಲ್ಲ ಎಂಬುದು ಮಲ್ಟಿಪ್ಲೆಕ್ಸ್‍ಗಳ ಮುಖ್ಯಸ್ಥರು ಅರ್ಥೈಸಿಕೊಳ್ಳುವುದು ಒಳಿತು. ಶೀಘ್ರವೇ ಈ ಬಗ್ಗೆ ಮಲ್ಟಿಪ್ಲೆಕ್ಸ್ ನವರು ಬದಲಾವಣೆ ತರಲಿ, ಒಳ್ಳೆ ಕನ್ನಡ ಸಿನಿಮಾಗಳಿಗೆ ಆದ್ಯತೆ ನೀಡಲಿ ಎಂದು ಈ ಮೂಲಕ ಕೇಳಿಕೊಳ್ಳುತ್ತೇವೆ.
Exit mobile version