`ಕನ್ನಡಿಗ’ನ ಮುಹೂರ್ತ ಸಂಭ್ರಮ

ಓಂಕಾರ್ ಮೂವೀಸ್ ಲಾಂಛನದಲ್ಲಿ ಎನ್.ಎಸ್. ರಾಜ್ ಕುಮಾರ್ ನಿರ್ಮಾಣದ, ಜಟ್ಟ, ಮೈತ್ರಿ, ಅಮರಾವತಿಯಂತಹ ಸದಭಿರುಚಿಯ ಸಿನಿಮಾಗಳನ್ನು ನಿರ್ದೇಶಿಸಿದ್ದ ಬಿ.ಎಂ. ಗಿರಿರಾಜ್ ನಿರ್ದೇಶನದಲ್ಲಿ, ವಿ.ರವಿಚಂದ್ರನ್ ಅಭಿನಯದ ಐತಿಹಾಸಿಕ ಕಥಾಹಂದರ ಇರುವ, ʻಕನ್ನಡಿಗʼ ಚಿತ್ರಕ್ಕೆ ಮುಹೂರ್ತ ಸಮಾರಂಭ ನೆರವೇರಿದೆ. ಡಾ. ಶಿವರಾಜ್ ಕುಮಾರ್ ಆರಂಭ ಫಲಕ ತೋರಿ, ರಾಘವೇಂದ್ರ ರಾಜ್ ಕುಮಾರ್ ಕ್ಯಾಮೆರಾ ಸ್ವಿಚ್ ಆನ್ ಮಾಡುವ ಮೂಲಕ ʻಕನ್ನಡಿಗʼನಿಗೆ ಚಾಲನೆ ದೊರೆತಿದೆ.

ಈ ನಾಡಿನ ಇತಿಹಾಸ ದಾಖಲಿಸುವಲ್ಲಿ ಲಿಪಿಕಾರ ವಂಶದ ಕೊಡುಗೆ ಅಪಾರ. 1858ರ ಆನಂತರದ ಕಾಲಘಟ್ಟವನ್ನು ʻಕನ್ನಡಿಗʼನೊಂದಿಗೆ ಮರುಸೃಷ್ಟಿಸಲಾಗುತ್ತಿದೆ. ಇಲ್ಲಿ ನಟ ಡಾ. ವಿ ರವಿಚಂದ್ರನ್ ಅವರು ಲಿಪಿಕಾರ ಗುಣಭದ್ರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಯಕಿಯಾಗಿ ಪಾವನಾ ನಟಿಸುತ್ತಿದ್ದಾರೆ. ಸಂಕಮ್ಮಬ್ಬೆಯಾಗಿ ಸ್ವಾತಿ ಚಂದ್ರಶೇಖರ್, ಕಿಟ್ಟಲ್ ಪಾತ್ರಕ್ಕೆ ಜೆಮಿ ವಾಲ್ಟರ್ ಅವರನ್ನು ಕರೆತರಲಾಗುತ್ತಿದೆ. ಕಮರೀಲ ಭಟ್ಟನಾಗಿ ಚಿ. ಗುರುದತ್, ಮಲ್ಲಿನಾಥನಾಗಿ ಬಾಲಾಜಿ ಮನೋಹರ್, ಮಠದ ಸ್ವಾಮಿಯ ಪಾತ್ರದಲ್ಲಿ ದತ್ತಣ್ಣ ಮತ್ತು ಅಚ್ಯುತ್ ಕುಮಾರ್ ಹರಿಗೋಪಾಲನ ಪಾತ್ರ ನಿರ್ವಹಿಸುತ್ತಿದ್ದಾರೆ. ರಾಣಿ ಚಿನ್ನಬೈರಾದೇವಿ ಎನ್ನುವ ಪ್ರಮುಖ ಪಾತ್ರದಲ್ಲಿ ನಟಿ ಸುಮಲತಾ ಅಂಬರೀಷ್ ಕಾಣಿಸಿಕೊಳ್ಳಲಿದ್ದಾರೆ.
ʻಈ ಸಿನಿಮಾದ ರೀತಿ, ಚಿತ್ರತಂಡ ಎಲ್ಲವೂ ನನಗೆ ಹೊಸದು. ಪ್ರತಿ ಸಿನಿಮಾ ಕೂಡಾ ನನಗೆ ಹೊಸದೇ. ಸ್ವಾತಂತ್ರ್ಯ ಪೂರ್ವದ ಕನ್ನಡಿಗನಾಗಿ ಕಾಣಿಸಿಕೊಳ್ಳುತ್ತಿರುವುದು ನನಗೆ ನಿಜಕ್ಕೂ ಸವಾಲಿನ ಕೆಲಸವೇ ಆಗಿದೆʼ ಎನ್ನುವುದು ರವಿಚಂದ್ರನ್ ಅವರ ಮಾತು. ನಿರ್ದೇಶಕ ಗಿರಿರಾಜ್ ಅವರು ಈ ಹಿಂದೆಯೂ ತಮ್ಮ ಚಿತ್ರದಲ್ಲಿ ನನಗೆ ಒಳ್ಳೆಯ ಪಾತ್ರಗಳನ್ನು ನೀಡಿದ್ದಾರೆ. ಈ ಬಾರಿಯೂ ಒಂದು ಗಟ್ಟಿಗಿತ್ತಿಯ ಪಾತ್ರವೇ ದೊರಕಿದೆ” ಎಂದರು. “ಕನ್ನಡ ಮಾತ್ರವಲ್ಲ, ದೇಶದ ಅದ್ಭುತ ತಂತ್ರಜ್ಞರಲ್ಲಿ ರವಿಚಂದ್ರನ್ ಪ್ರಮುಖರು. `ಕನ್ನಡಿಗ’ ಸಿನಿಮಾದ ಮೂಲಕ ಮೊದಲ ಬಾರಿಗೆ ಅವರೊಂದಿಗೆ ಬಣ್ಣ ಹಚ್ಚುತ್ತಿರುವುದು ಖುಷಿ ತಂದಿದೆ. ಅವರ ತಮ್ಮನ ಪಾತ್ರ ನನಗೆ ದಕ್ಕಿರುವುದು ನನ್ನ ಪಾಲಿನ ಹೆಮ್ಮೆ” ಎಂದು ನಟ ಬಾಲಾಜಿ ಮನೋಹರ್ ಹೇಳಿದರು.

ನೂರೈವತ್ತು ವರ್ಷಕ್ಕೂ ಹಿಂದಿನ ಕಥೆ ʻಕನ್ನಡಿಗʼನದ್ದಾಗಿದ್ದು, ಪಾತ್ರಗಳ ಜೊತೆಗೆ ಅಂದಿನ ಪರಿಸರ, ಕಟ್ಟಡಗಳನ್ನು ಮರುಸೃಷ್ಟಿ ಮಾಡುವುದು ನಿಜಕ್ಕೂ ಸವಾಲಿನ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ, ಕಲಾ ನಿರ್ದೇಶಕ ಹೊಸ್ಮನೆ ಮೂರ್ತಿ ಮತ್ತು ಚಿತ್ರತಂಡ ಸಾಕಷ್ಟು ಜನ ಇತಿಹಾಸಕಾರರನ್ನು ಸಂಪರ್ಕಿಸಿ, ಹಲವಾರು ಕೃತಿಗಳನ್ನು ಪರಾಮರ್ಶಿಸಿ ಸೆಟ್ ಗಳನ್ನು ರೂಪಿಸುತ್ತಿದ್ದಾರೆ. ಸಾಗರ, ಚಿಕ್ಕಮಗಳೂರಿನ ಸುತ್ತಮುತ್ತಲಿನ ಕೆಲವು ಪ್ರದೇಶಗಳನ್ನು ಹಾಗೆಯೇ ಬಳಸಿಕೊಳ್ಳಲಾಗುತ್ತಿದೆ. ಬುಧವಾರದಿಂದಲೇ ಚಿತ್ರೀಕರಣ ಶುರುಮಾಡಿ, ಒಂದೇ ಹಂತದಲ್ಲಿ ಪೂರ್ಣಗೊಳಿಸುವುದು ಚಿತ್ರತಂಡದ ಸದ್ಯದ ಯೋಜನೆ.

ಜಿ.ಎಸ್.ವಿ ಸೀತಾರಾಮ್ ಛಾಯಾಗ್ರಹಣ, ರವಿ ಬಸ್ರೂರ್ ಸಂಗೀತ, ಅರ್ಜುನ್ ಕಿಟ್ಟು ಸಂಕಲನ, ಹೊಸ್ಮನೆ ಮೂರ್ತಿ ಅವರ ಕಲಾ ನಿರ್ದೇಶನ ʻಕನ್ನಡಿಗʼ ಚಿತ್ರಕ್ಕಿದೆ.

Exit mobile version