`ಕತ್ಲೆ ಕಾಡು’ ಮತ್ತು ಅದರ ಹಾಡು

ಲಾಕ್ಡೌನ್‌ಗೂ ಮೊದಲೇ ನಿಗದಿಯಾಗಿದ್ದ ಆಡಿಯೋ ಬಿಡುಗಡೆ ಕಾರ್ಯಕ್ರಮವೊಂದು ಕೆಲವೇ ದಿನಗಳ ಹಿಂದೆ ನೆರವೇರಿತು. ಅರಮನೆ ಮೈದಾನದ ಗಾಯತ್ರಿ ವಿಹಾರ್ ಒಳಗೆ ಸಾಗರ್‌ನಲ್ಲಿ ಕಾರ್ಯಕ್ರಮ ನೆರವೇರಿತು.

ನಿರ್ದೇಶಕ ರಾಜು ದೇವಸಂದ್ರ ಮಾತನಾಡಿ “ಕತ್ಲೆಕಾಡು ಎನ್ನುವುದು ನಾನೇ ಬರೆದಿರುವ ಒಂದು ಕಾಲ್ಪನಿಕ ಕತೆ. ಕತ್ಲೆಕಾಡು ಎನ್ನುವ ಅರಣ್ಯ ಪ್ರದೇಶಕ್ಕೆ ಹೋದವರು ಯಾರೂ ವಾಪಾಸಾಗಿಲ್ಲ ಎನ್ನುವುದು ಅಲ್ಲಿನ ಇತಿಹಾಸವಾಗಿರುತ್ತದೆ. ಅಂಥ ಕಾಡಿಗೆ ಆರು ಮಂದಿ ಯುವಕ ಯುವತಿಯರ ಟ್ರೆಕ್ಕಿಂಗ್ ತಂಡವೊಂದು ಪ್ರವೇಶಿಸುತ್ತದೆ. ಅವರಿಗೆ ಕಾಡಿನೊಳಗೆ ಕೆಲವು ವ್ಯಕ್ತಿಗಳು ಎದುರಾಗುತ್ತಾರೆ. ಅವರು ಯಾರು? ಅವರಿಂದ ಟ್ರೆಕ್ಕಿಂಗ್ ತಂಡಕ್ಕೆ ಎದುರಾಗುವ ಅಪಾಯವೇನು? ಅದನ್ನು ಅವರು ಹೇಗೆ ಎದುರಿಸುತ್ತಾರೆ ಎನ್ನುವುದೇ ಚಿತ್ರದ ಕತೆ” ಎಂದರು. ನಿರ್ಮಾಪಕ ಸಾಗರ್ ನಿಯಾಜ್ “ನನ್ನ ತಮ್ಮ ಶಿವಾಜಿ ನಗರ ಲಾಲ್ ನನ್ನು ಹೀರೋ ಮಾಡಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಹಾಗಾಗಿ ಈ ಸಿನಿಮಾ ಮಾಡಿದ್ದೇನೆ” ಎಂದರು.

ಚಿತ್ರದಲ್ಲಿ ಪ್ರಧಾನ ಪಾತ್ರವನ್ನು ನಿಭಾಯಿಸಿರುವ ಶಿವಾಜಿ ನಗರ ಲಾಲ್ ಮಾತನಾಡಿ, “ನಿರ್ದೇಶಕ ರಾಜು ದೇವಸಂದ್ರ ಅವರು ಸಹಾಯಕ ನಿರ್ದೇಶಕರಾಗಿದ್ದ ದಿನಗಳಿಂದಲೇ ಅವರ ಶಿಫಾರಸ್ಸಿನಲ್ಲಿ ನನಗೆ ಸಣ್ಣಪುಟ್ಟ ಪಾತ್ರಗಳನ್ನು ಮಾಡುವ ಅವಕಾಶ ನೀಡಿದ್ದರು. ಇದೀಗ ಕತ್ಲೆಕಾಡು ಚಿತ್ರದಲ್ಲಿ ಲೀಡ್ ರೋಲ್ ಮಾಡುವ ಅವಕಾಶ ನೀಡಿದ್ದಾರೆ. ಅದಕ್ಕೆ ನಮ್ಮಣ್ಣ ನಿರ್ಮಾಪಕ ನಿಯಾಜ್ ಅವರೊಂದಿಗೆ ಉಸ್ಮಾನ್ ಇಝಾಜ್, ಅಫ್ಷರ್ ಭಾಯ್ ಮೊದಲಾದವರು ನೀಡಿರುವ ಸಹಕಾರ ಮುಖ್ಯವಾಗಿರುವಂಥದ್ದು. ಏನೋ ನನ್ನಿಂದಾಗುವ ಪ್ರಯತ್ನ ಮಾಡಿದ್ದೇನೆ” ಎಂದು ವಿನೀತರಾದರು. ನಿರ್ಮಾಪಕ ಸಾಗರ್ ನಿಯಾಜ್ ಅವರು ಮೂಲತಃ ಗಾಯಕರಾಗಿದ್ದು ಚಿತ್ರದಲ್ಲಿ ಒಬ್ಬ ಅರಣ್ಯಾಧಿಕಾರಿಯ ಪಾತ್ರವನ್ನು ಕೂಡ ನಿಭಾಯಿಸಿದ್ದಾರೆ. ಮಾತ್ರವಲ್ಲ, ಹಾಡೊಂದರಲ್ಲಿಯೂ ಕಾಣಿಸಿಕೊಂಡಿದ್ದು ಆ ಹಾಡನ್ನು ಖುದ್ದು ನಿಯಾಜ್ ಸಾಗರ್ ಹಾಡಿದ್ದಾರೆ. ಪತ್ರಕರ್ತ ಶಶಿಕರ ಪಾತೂರು ಅವರು ಈ ಗೀತೆಯನ್ನು ರಚಿಸಿದ್ದು ಆರವ್ ರಿಷಿಕ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು ಮತ್ತೊಂದು ಗೀತೆಯನ್ನು ಕೂಡ ಸಾಗರ್ ನಿಯಾಜ್ ಅವರೇ ಹಾಡಿದ್ದು ನಿರ್ದೇಶಕ ರಾಜು ದೇವಸಂದ್ರ ಗೀತೆಗೆ ಸಾಹಿತ್ಯ ಒದಗಿಸಿದ್ದಾರೆ.

ಚಿತ್ರದ ಹಾಡುಗಳ ಸಿಡಿಯನ್ನು ಯುವನಟ ಅಂಡರ್‌ವರ್ಲ್ಡ್' ಸಿನಿಮಾ ಖ್ಯಾತಿಯ ನಾಯಕ ರಾಜವರ್ಧನ್ ಬಿಡುಗಡೆಗೊಳಿಸಿದರೆ ಚಿತ್ರದ ಟೀಸರನ್ನು ಗಾಯತ್ರಿ ವಿಹಾರ್ ಮಾಲೀಕ ಪಂಕಜ್ ಕೊಠಾರಿ ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ನಾಯಕಿಯರಾದ ಸಿಂಧೂ ರಾವ್,ನಮ್ಮ ಸೂಪರ್‌ ಸ್ಟಾರ್ಸ್‌’ ಮಾಸಿಕದ ಅಫ್ಝಲ್, ಕಾರ್ಯಕ್ರಮದಲ್ಲಿ ಅಮಿತಾಬ್ ಬಚ್ಚನ್ ತದ್ರೂಪಿ ಗುಲ್ಫಾಮ್ ಅವರು ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಕೋವಿಡ್‌ ಸಮಸ್ಯೆ ಕಡಿಮೆಯಾಗಿ ಚಿತ್ರಮಂದಿರಗಳು ಸಹಜ ಸ್ಥಿತಿಗೆ ಮರಳುತ್ತಿದ್ದಹಾಗೆ ಸಿನಿಮಾ ಬಿಡುಗಡೆಗೊಳಿಸಲಿರುವುದಾಗಿ ಚಿತ್ರತಂಡ ತಿಳಿಸಿದೆ.

Exit mobile version