ಕಾತ್ಯಾಯಿನಿಯನ್ನು ಯಾವ ರೀತಿ ಪೂಜಿಸಿದ್ರೆ ಬುದ್ಧಿಶಕ್ತಿ ಹೆಚ್ಚುತ್ತೆ?

ಚಂದ್ರಮಾನ ತಿಂಗಳ ಅಶ್ವಯುಜ ಮಾಸದ ಪ್ರತಿಪಾದದಲ್ಲಿ ನವರಾತ್ರಿ ಹ್ಬಬವನ್ನು ಆಚರಿಸಲಾಗುತ್ತದೆ. ನವರಾತ್ರಿ ನಡೆಯುವ ಒಂಭತ್ತು ದಿನಗಳ ಕಾಲ ಕ್ರಮವಾಗಿ ಮಾತೆ ದುರ್ಗಾ, ಲಕ್ಷ್ಮೀ ದೇವಿ, ಸರಸ್ವತಿ ದೇವಿಯನ್ನು ತಲಾ ಮೂರು ದಿನಗಳಂತೆ ಪೂಜೆ ಮಾಡಲಾಗುತ್ತದೆ. ಈ ಮಾಸವನ್ನು ಹಬ್ಬಗಳ ಮಾಸ ಎಂದೇ ಕರೆಯಬಹುದು. ನವರಾತ್ರಿ ಎಂದರೆ ತಾಯಿ ದುರ್ಗಾ ಮಾತೆಯನ್ನು 9 ರೂಪದಲ್ಲಿ ಪೂಜಿಸುವ ಹಬ್ಬವಾಗಿದೆ. ದುರ್ಗೆಯನ್ನು ಶಕ್ತಿ ಸ್ವರೂಪಿಣಿ, ಮಾತೃ ಸ್ವರೂಪಿಣಿ ಎಂದು ನಾನಾ ಬಗೆಯ ಹೆಸರುಗಳಲ್ಲಿ  ಕರೆಯಲಾಗುತ್ತದೆ. ದುರ್ಗೆಯು ಒಂಭತ್ತು ದಿನಗಳ ಕಾಲ ಒಂಭತ್ತು ಅವತಾರಗಳನ್ನು ತಾಳಿ ಮಹಿಷಾಸುರ ಮರ್ದಿನಿಯಾದಳು ಎಂಬ ಪ್ರತೀತಿ ಇದೆ. ಆದ್ದರಿಂದ ೧೦ನೇ ದಿನವನ್ನು ವಿಜಯದಶಮಿ ಎಂದು ಆಚರಿಸಲಾಗುತ್ತದೆ.

ಅಧಿಕ ಮಾಸದ ಕಾರಣದಿಂದಾಗಿ ಈ ಬಾರಿ ನವರಾತ್ರಿಯು ಅಕ್ಟೋಬರ್ ತಿಂಗಳಿನಲ್ಲಿ ಬಂದಿದೆ. ನವರಾತ್ರಿಯು ಚಾಂದ್ರಮಾನ ಪಂಚಾಂಗದ ಪ್ರಕಾರ ಆಗಾಗ್ಗೆ ಬದಲಾಗುತ್ತಿರುತ್ತದೆ. ನವ ಎಂದರೆ ಸಂಸ್ಕೃತದಲ್ಲಿ ಒಂಭತ್ತು ಎಂದು ಅರ್ಥ. ರಾತ್ರಿಯ ಸಮಯದಲ್ಲಿ ಒಂಭತ್ತು ದಿನಗಳ ದುರ್ಗೆಯ ಆರಾಧನೆಯನ್ನು ವಿವಿಧ ಬಗೆಯ ಭಕ್ಷ್ಯ, ಭೋಜ್ಯಗಳನ್ನು ಇಟ್ಟು, ವಿವಿಧ ಹೂವಿನ ಅಲಂಕಾರ, ಗೊಂಬೆ ಅಲಂಕಾರಗಳ ಮೂಲಕ ಆಚರಿಸಲಾಗುತ್ತದೆ. ಇನ್ನು ಅನೇಕರು ಭಕ್ತಿ ಭಾವದಿಂದ ಉಪವಾಸ ವ್ರತ, ಉಪಾಸನೆಗಳನ್ನು ಮಾಡುವ ಮೂಲಕ ಆಚರಿಸುತ್ತಾರೆ.

ಅದರಲ್ಲೂ ಕರ್ನಾಟಕದ ಮೈಸೂರು ಜಿಲ್ಲೆಯು ನವರಾತ್ರಿಯ ದಸರಾ ಹಬ್ಬ ವಿಖ್ಯಾತಿಯನ್ನು ಹೊಂದಿದೆ. ಮಾತ್ರವಲ್ಲದೇ ಮಂಗಳೂರು, ಕೊಲ್ಲೂರು ಹೀಗೆ ನಾನಾ ಕಡೆಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನವರಾತ್ರಿ ಆರಂಭವಾಗಿ ಐದು ದಿನಗಳೇ ಕಳೆದಿವೆ. ಆರನೇ ದಿನವಾದ ಇಂದು ಶಾರದಾ ಪೂಜೆ. ಶಾರದಾ ಪೂಜೆ ಭಾರತೀಯರಿಗೆ ತುಂಬಾ ವಿಶೇಷ. ಶಾರದೆ ಜ್ಞಾನ ದೇವತೆ, ಇಂದು ದೇವಿಯ ಬಳಿ ಜ್ಞಾನ ಭಿಕ್ಷೆಯನ್ನು ಬೇಡುತ್ತಾರೆ. ಈ ದಿನದಂದು ಎಲ್ಲರ ಮನೆಯಲ್ಲೂ ಸಂಭ್ರಮ, ಸಡಗರ ಮನೆ ಮಾಡಿರುತ್ತದೆ, ಶಾರದೆಯನ್ನು ಪುಸ್ತಕಗಳನ್ನು ಇಟ್ಟು ಆರಾಧಿಸುತ್ತಾರೆ. ಚಿಕ್ಕ ಮಕ್ಕಳಿದ್ದ ಮನೆಗಳಲ್ಲಿಇಂದು ಅಕ್ಷರಾಭ್ಯಾಸ ಮಾಡುವ ಸಂಪ್ರದಾಯವಿದೆ.

ಈ ದಿನದ ವಿಶೇಷತೆ ಏನು?

ಚಂದ್ರಮಾನ ತಿಂಗಳ ಅಶ್ವಯುಜ ಮಾಸದ ಶುಕ್ಲಪಕ್ಷದ ಷಷ್ಠಿಯ ಈ ದಿನವನ್ನು ಶಾರದೆಯನ್ನು ಆರಾಧಿಸುವ ದಿನವಾಗಿದೆ. ಈ ದಿನದಂದು ಶಾರದೆಯನ್ನು ಭಕ್ತಿ, ಭಾವದಿಂದ ಆರಾಧಿಸಿದರೆ, ಬುದ್ದಿ, ಸಂಪತ್ತು ಹಾಗೂ ಸಂತೋಷವನ್ನು ಕರುಣಿಸುತ್ತಾಳೆ ಎಂಬ ನಂಬಿಕೆ ಆರಾಧಕರದು. ಈ ದಿನದಂದು ದುರ್ಗೆಯ ಪ್ರತಿರೂಪವಾಗಿ ಕಾತ್ಯಯಿನಿಯನ್ನು ಆರಾಧಿಸಲಾಗುತ್ತದೆ.

ಕಾತ್ಯಾಯಿನಿ ದೇವಿಯು ಮೂರು ಕಣ್ಣು ಹಾಗೂ ಹಣೆಯ ಮೇಲೆ ಅರ್ಧ ಚಂದ್ರಾಕ್ರತಿಯ ಅಲಂಕಾರವನ್ನು ಹೊಂದಿರುತ್ತಾಳೆ. ಈ ರೂಪದ ಕಾತ್ಯಾಯಿನಿ ದೇವಿಯನ್ನು ಪ್ರದೋಷಕಾಲದಲ್ಲಿ ಪೂಜಿಸಬೇಕು. ಈ ರೀತಿಯಲ್ಲಿ ಪೂಜಿಸಿದರೆ ಶೀಘ್ರ ಫಲಪ್ರಾಪ್ತಿಯಾಗುತ್ತದೆ ಎಂಬುದು ಪ್ರಾಚಿನದಿಂದಲೂ ಆರಾಧಕರು ನಂಬಿಕೊಂಡು ಬಂದಿದ್ದಾರೆ. ಕಾತ್ಯಾಯಿನಿಯು ಪಾರ್ವತಿ ದೇವಿಯ ಪ್ರತಿರೂಪವಾದ್ದರಿಂದ ಬಿಲ್ವಪತ್ರೆ, ಜೇನುತುಪ್ಪ, ಹಣ್ಣು ಹಂಪಲು ಹಾಗೂ ಗುಲಾಬಿ ಬಣ್ಣದ ಹೂವುಗಳನ್ನಿಟ್ಟು ವಿಶೇಷವಾಗಿ ಪೂಜಿಸಲಾಗುತ್ತದೆ. ಅದರ ಜತೆಗೆ ಹಾಲು ಹಾಗೂ ಒಣ ಹಣ್ಣುಹಂಪಲು ಸೇರಿಸಿ ಮಾಡಿದ ಖಾದ್ಯವನ್ನು ನೈವೇದ್ಯದ ರೂಪದಲ್ಲಿ ದೇವಿಗೆ ಅರ್ಪಿಸಿ ಪ್ರಸಾದರೂಪದಲ್ಲಿ ಹಂಚಲಾಗುತ್ತದೆ.

ಕಾತ್ಯಾಯಿನಿ ದೇವಿಯ ಹಿನ್ನಲೆ:

ಪಾರ್ವತಿ ದೇವಿಯಂತಹ ಮಗಳನ್ನು ಹೊಂದಬೇಕೆನ್ನುವ ಆಶಯವನ್ನು ಹೊಂದಿದ್ದ, ಕತ್ಯಾ ಎಂಬ ಋಷಿಯು ಭಕ್ತಿಯಿಂದ ತಪಸ್ಸನ್ನು ಕೈಗೊಂಡಿದ್ದನು. ಋಷಿಯ ಭಕ್ತಿಗೆ ಮೆಚ್ಚಿದ ದುರ್ಗಾ ದೇವಿಯು ಆಶೀರ್ವಾದ ಮಾಡಿದಳು. ಅಂತೆಯೇ ಮಗಳು ಹುಟ್ಟಿದ ಮೇಲೆ ಕಾತ್ಯಾಯಿನಿ ಎಂದು ಹೆಸರಿಟ್ಟರು. ಅವಳು ದೊಡ್ಡವಳಾದ ನಂತರ ತನ್ನ ಹತ್ತು ಕೈಗಳಲ್ಲಿ ಶಸ್ತ್ರಾಸ್ತ್ರವನ್ನು ಹಿಡಿದು ದುಷ್ಟ ಶಿಕ್ಷಕಿಯಾಗಿ ಜಗತ್ತನ್ನು ಸುತ್ತಲು ಪ್ರಾರಂಭಿಸಿದಳು. ದುಷ್ಟ ರಾಕ್ಷಸನ ಸಂಹಾರಕ್ಕಾಗಿ ದುರ್ಗಾ ದೇವಿಯು ಅವತರಿಸಿ ಬಂದಳು ಎಂದು ಹೇಳಲಾಗುತ್ತದೆ.

ಕಾತ್ಯಾಯಿನಿ ದೇವಿಯು ಗುರು ಅಥವಾ ಬ್ರಹಸ್ಪತಿ ಗ್ರಹವನ್ನು ಆಳುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಬ್ರಹಸ್ಪತಿ ಅತ್ಯಂತ ಪ್ರಮುಖವಾದ ಗ್ರಹವಾಗಿದೆ. ಗುರು ಗ್ರಹದ ದೃಷ್ಟಿ ಹಾಗೂ ಪ್ರಭಾವ ಉತ್ತಮವಾಗಿದ್ದರೆ ವ್ಯಕ್ತಿ ಜೀವನದಲ್ಲಿ ಅಪಾರ ಪ್ರಯೋಜನ, ಸಮೃದ್ಧಿ ಹಾಗೂ ಯಶಸ್ಸನ್ನು ಪಡೆದುಕೊಳ್ಳುತ್ತಾನೆ ಎಂದು ಹೇಳಲಾಗುವುದು. ಕಾತ್ಯಾಯಿನಿ ದೇವಿಯ ಆರಾಧನೆ ಮಾಡುವುದರಿಂದ ಭಕ್ತರು ಗುರು ಗ್ರಹದಿಂದ ಪಡೆಯಬಹುದಾದ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಕುಂಡಲಿಯಲ್ಲಿ ಗುರುಗ್ರಹದ ತೊಂದರೆ ಇದ್ದರೆ ಪರಿಹಾರ ಕಾಣುವುದು.

Exit mobile version