6 ತಿಂಗಳ ಬಳಿಕ ಇಂದು ತೆರೆದ ಕೇದಾರನಾಥ ಬಾಗಿಲು

ಡೆಹ್ರಾಡೂನ್, ಮೇ. 17: ಆರು ತಿಂಗಳ ಚಳಿಗಾಲದ ವಿರಾಮದ ಬಳಿಕ ಉತ್ತರಾಖಂಡದ ಕೇದಾರನಾಥ ದೇವಾಲಯದ ಪ್ರವೇಶ ದ್ವಾರವನ್ನು ಸೋಮವಾರ ತೆರೆಯಲಾಗಿದೆ. ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಸೀಮಿತ ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದರು.

‘ಬೆಳಿಗ್ಗೆ 5 ಗಂಟೆಗೆ ದೇಗುಲದ ದ್ವಾರಗಳನ್ನು ತೆರೆಯಲಾಗಿದ್ದು, ಅರ್ಚಕರು ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಮೊದಲ ಪೂಜೆಯನ್ನು ನಡೆಸಿದರು’ ಎಂದು ಚಾರ್‌ಧಾಮ್‌ ದೇವಸ್ಥಾನಂ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು.

ಈ ಬಗ್ಗೆ ಟ್ವೀಟ್‌ ಮಾಡಿರುವ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಅವರು, ‘ದೇವಸ್ಥಾನದ ದ್ವಾರಗಳನ್ನು ತೆರೆಯಲಾಗಿದೆ. ದೇವರು ಎಲ್ಲರ ಆರೋಗ್ಯವನ್ನು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ. ಜನರ ಸುರಕ್ಷತೆಯ ದೃಷ್ಟಿಯಿಂದ ಯಾತ್ರೆಗಳನ್ನು ತಾತ್ಕಲಿಕವಾಗಿ ಸ್ಥಗಿತಗೊಳಸಲಾಗಿದೆ. ಭಕ್ತಾಧಿಗಳು ವರ್ಚುವಲ್‌ ವೇದಿಕೆ ಮೂಲಕ ದೇವರ ದರ್ಶನ ಪಡೆಯಬೇಕು’ ಎಂದು ಮನವಿ ಮಾಡಿದ್ದಾರೆ.

‘ಕೋವಿಡ್ ಸಾಂಕ್ರಾಮಿಕ ನಿಯಂತ್ರಣಕ್ಕೆ ಬಂದ ಕೂಡಲೇ ಚಾರ್‌ಧಾಮ್‌ ಯಾತ್ರೆಯನ್ನು ಪುನರಾರಂಭಿಸಲಾಗುವುದು’ ಎಂದು ಉತ್ತರಾಖಂಡದ ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್‌ ತಿಳಿಸಿದ್ದಾರೆ.

Exit mobile version