ಪ್ರತಿಷ್ಠಿತ `ಕೆಂಟಕಿ ಕರ್ನಲ್ ಪ್ರಶಸ್ತಿ’ ಪಡೆದ ಏಕೈಕ ಭಾರತೀಯ ನಮ್ಮ ಅಣಾವ್ರು!

dr rajkumar

ಕನ್ನಡದ ವರನಟ, ನಟಸಾರ್ವಭೌಮ(Natasaarvabhowma), ಅಭಿಮಾನಿಗಳ ಪ್ರೀತಿಯ ಅಣ್ಣಾವ್ರು ಡಾ. ರಾಜ್ ಕುಮಾರ್(Dr. Rajkumar) ಅವರ ಪುಣ್ಯತಿಥಿಯ ದಿನ ಏಪ್ರಿಲ್ 12 ಅವರ ನೆನಪಿನ ದಿನ.

ಅವರು ನಮ್ಮನ್ನು ಅಗಲಿ 2022 ಏಪ್ರಿಲ್ 12ಕ್ಕೆ 16 ವರ್ಷಗಳಾಗಿವೆ. 2006ರ ಏ.12, ಇಡೀ ಕರುನಾಡು ಕಣ್ಣೀರಿನಲ್ಲಿ ಮುಳುಗಿದ ದಿನ. ಕನ್ನಡ ಚಿತ್ರರಂಗಕ್ಕೆ ‘ತಾರಾಮೌಲ್ಯ’ವನ್ನು ತಂದಿಟ್ಟ ಮೇರು ನಟ ಡಾ.ರಾಜಕುಮಾರ್ ವಿಧಿವಶರಾದ ದುರ್ದಿನ. ಒಂದು ಕಾಲದಲ್ಲಿ 20 ವರ್ಷಗಳ ಅವಧಿಯಲ್ಲಿ, ಕೇವಲ 40 ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ತೆರೆಕಾಣುತ್ತಾ ಇದ್ದವು. ಆದ್ರೆ, ರಾಜ್ ಕುಮಾರ್ ಆಗಮನದ ಕೇವಲ 10 ವರ್ಷಗಳಲ್ಲಿ ತಯಾರಾದ ಚಿತ್ರಗಳ ಸಂಖ್ಯೆ 125. ಈ ಚಿತ್ರಗಳಲ್ಲಿ ರಾಜ್‌ಕುಮಾರ್ ಅವರು ನಾಯಕರಾಗಿ ನಟಿಸಿದ ಚಿತ್ರಗಳು 53.

ಅಣ್ಣಾವ್ರು ಅಭಿನಯದ ಭಕ್ತ ವಿಜಯ ಕನ್ನಡ ಚಿತ್ರಕ್ಕೆ ಮೊಟ್ಟ ಮೊದಲ ಫಿಲಂ ಫೇರ್ ಪ್ರಶಸ್ತಿ ತಂದುಕೊಟ್ಟ ಚಿತ್ರ ಜೊತೆಗೆ ಕೇಂದ್ರ ಸರ್ಕಾರದ ಗೌರವಾನ್ವಿತ ರಾಷ್ಟ್ರಪತಿಗಳ ಅರ್ಹತಾ ಪತ್ರವನ್ನು ಪಡೆದದ್ದು ಹೆಮ್ಮೆಯ ಸಂಗತಿ. 1956ರಲ್ಲಿ ಡಾ.ರಾಜ್ ಅಭಿನಯದಲ್ಲಿ ಹರಿಭಕ್ತ, ಓಹಿಲೇಶ್ವರ ಚಿತ್ರಗಳಂತೂ ಹಿಟ್ ಪಟ್ಟವನ್ನ ಸೇರಿದವು. ಹಾಗೇ 1957ರಲ್ಲಿ ರಾಯರಸೊಸೆ ಪ್ರಥಮ ಸಾಮಾಜಿಕ ಚಿತ್ರವೆನಿಸಿಕೊಂಡಿತು. ಇನ್ನೂ 1958ರಲ್ಲಿ ಸತಿ ನಳಾಯಿನಿ, ಶ್ರೀಕೃಷ್ಣಗಾರುಡಿ, ಭೂ ಕೈಲಾಸ, ಅಣ್ಣತಂಗಿ, 1959ರಲ್ಲಿ ಧರ್ಮ ವಿಜಯ, ಮಹಿಷಾಸುರ ಮರ್ದಿನಿ, 1960ರಲ್ಲಿ ರಣಧೀರ ಕಂಠೀರವ, ಭಕ್ತ ಕನಕದಾಸ, ರಾಣಿ ಹೊನ್ನಮ್ಮ, ಆಶಾಸುಂದರಿ, ದಶಾವತಾರ, ಶ್ರೀ ಶೈಲ ಮಹಾತ್ಮೆ, ಕಿತ್ತೂರು ಚೆನ್ನಮ್ಮ, ಕಣ್ತೆರದು ನೋಡು, ಕೈವಾರ ಮಹಾತ್ಮೆ ಭಕ್ತಿಯ ಪರಕಾಷ್ಟೆಯನ್ನ ಪ್ರೇಕ್ಷಕರಲ್ಲಿ ಬಿತ್ತಿದವು.

ಅಬ್ಬಾ ಒಂದೊಂದು ಸಿನಿಮಾ, ಅಂದಿನ ಕಾಲದಲ್ಲಿ ಹಾಗೇ ನೋಡುಗರನ್ನ ಭಕ್ತಿಯ ಭಾವದೊಳಗೆ ತೇಲಿಸಿಬಿಡುತ್ತಿದ್ದವೂ.
ಡಾ.ರಾಜ್ ಅಭಿನಯದಲ್ಲಿ ಮೂಡಿಬಂದ ಭಕ್ತ ಕನಕದಾಸ, ಚಿತ್ರ ಕನ್ನಡ ಚಿತ್ರರಂಗದಲ್ಲಿ ಒಂದು ಮೈಲುಗಲ್ಲಾಯಿತು. ಹಾಗೇ ಕನ್ನಡ ಚಿತ್ರರಂಗದ ದಾಖಲೆ ಪುಟಗಳಲ್ಲಿ ಸೇರಿದ ರಾಜ್ ಅವರ 100ನೇ ಚಿತ್ರ ಇದಾಗಿತ್ತು. ಡಾ.ರಾಜ್ ಗೆ ಮೊಟ್ಟ ಮೊದಲ ಪದ್ಮಭೂಷಣ ಪ್ರಶಸ್ತಿ ಬಂದ ತರುವಾಯ ಬಿಡುಗಡೆಯಾದ ಕವಿರತ್ನ ಕಾಳಿದಾಸ ಚಿತ್ರ, 1983ರ ಕಾಲದಲ್ಲಿ ಸಕತ್ ಸದ್ದು ಮಾಡ್ತು. ಐತಿಹಾಸಿಕತೆ, ಪೌರಾಣಿಕ ಕತಾ ಹಂದರದ ಜೊತೆಗೆ ಸಾಮಾನ್ಯ ವ್ಯಕ್ತಿಯೂ ದೈವ ಕೃಪೆ ಇದ್ದರೇ ಉನ್ನತ ವ್ಯಕ್ತಿ ಆಗಬಲ್ಲ ಎಂಬುದನ್ನ ಈ ಚಿತ್ರ ಸಾಬೀತು ಪಡಿಸಿತು.


ಇನ್ನು ಪ್ರತಿಷ್ಟಿತ ಕೆಂಟಕಿ ಕರ್ನಲ್ ಪ್ರಶಸ್ತಿ ಪಡೆದ ಏಕೈಕ ಭಾರತೀಯ ಎಂಬ ಹೆಮ್ಮೆಗೂ ಪಾತ್ರರಾಗಿದ್ದಾರೆ ಡಾ. ರಾಜಕುಮಾರ್. ಕೆಂಟಕಿ ಕರ್ನಲ್ ಎಂಬುದು ಅಮೇರಿಕಾದ ಕೆಂಟಕಿ ರಾಜ್ಯದಿಂದ ನೀಡಲ್ಪಡುವ ಅತ್ಯುನ್ನತ ಗೌರವ ಪ್ರಶಸ್ತಿಯಾಗಿದೆ. ಒಂದು ಸಮುದಾಯ, ರಾಜ್ಯ ಅಥವಾ ರಾಷ್ಟ್ರಕ್ಕೆ ಗಮನಾರ್ಹ ಸಾಧನೆ ಮತ್ತು ಅತ್ಯುತ್ತಮ ಸೇವೆಯನ್ನು ಸಾಧನೆಗೈದಿರುವ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.

ಪ್ರಸಿದ್ಧ ವ್ಯಕ್ತಿಗಳು, ಕಲಾವಿದರು, ಬರಹಗಾರರು, ಕ್ರೀಡಾಪಟುಗಳು, ಪ್ರದರ್ಶಕರು, ಉದ್ಯಮಿಗಳು, ಅಮೆರಿಕಾ ಮತ್ತು ವಿದೇಶಿ ರಾಜಕಾರಣಿಗಳು ಮತ್ತು ವಿದೇಶಿ ರಾಜ ಕುಟುಂಬಗಳ ಸದಸ್ಯರನ್ನೂ ಒಳಗೊಂಡಂತೆ ಈ ಗೌರವವನ್ನು ವಿವಿಧ ಜನರಿಗೆ ನೀಡಲಾಗಿದೆ. ಈ ಪ್ರಶಸ್ತಿಯನ್ನು ಪಡೆದ ಏಕೈಕ ಕನ್ನಡದ ನಟ ಎಂದರೆ ಅದು ವರನಟ ಡಾ. ರಾಜ್ ಕುಮಾರ್ ಸರ್!

Exit mobile version