ಖಾಸಗಿ ಕಂಪನಿಗಳ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಬಿಕ್ಕಟ್ಟು ಬಗೆಹರಿಸಲಿ: ಸಿದ್ದರಾಮಯ್ಯ

ಬೆಂಗಳೂರು, ಡಿ. 20: ಖಾಸಗಿ ಕಂಪನಿಗಳ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವೆ ಉಂಟಾಗಿರುವ ಬಿಕ್ಕಟ್ಟನ್ನು ಸರ್ಕಾರದ ಮಧ್ಯಸ್ಥಿಕೆ ಮೂಲಕ ಸೌಹಾರ್ದಯುತವಾಗಿ ಇತ್ಯರ್ಥಪಡಿಸಬೇಕು ಹಾಗೂ ಈಗಾಗಲೇ ಜಾರಿಗೆ ತಂದಿರುವ ಎಲ್ಲ ಜನವಿರೋಧಿ ಕಾಯ್ದೆಗಳನ್ನು ರದ್ದು ಮಾಡಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಕಾರ್ಮಿಕರಿಗೆ ಶೇ.80 ರಷ್ಟು ಸಂಬಳ ಸಿಕ್ಕಿಲ್ಲ ಎಂದು ಕೈಗಾರಿಕೆಗಳ ಮ್ಯಾನೇಜ್‍ಮೆಂಟ್ ಅಸೋಸಿಯೇಷನ್ ಹೇಳಿದೆ . ಶೇ.70ರಷ್ಟು ಹಂಗಾಮಿ ಹಾಗೂ ತರಬೇತಿ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಇದರಿಂದ ಲಕ್ಷಾಂತರ ಕಾರ್ಮಿಕರ ಬದುಕು ಬೀದಿಪಾಲಾಗಿದೆ.

ಸುಸೂತ್ರವಾಗಿ ನಡೆಯುತ್ತಿದ್ದ ಬಿಡದಿಯ ಟೊಯೋಟಾ ಕಂಪನಿಯ ಘಟಕವನ್ನು ಲಾಕೌಟ್ ಮಾಡಲಾಗಿದೆ, ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿ ಇರುವ ವಿಸ್ಟ್ರಾನ್ ಎಂಬ ಕಂಪನಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸೂಕ್ತ ವೇತನ ನೀಡುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ರಾಮನಗರ ಜಿಲ್ಲೆಯಲ್ಲಿರುವ ಅರವಿಂದ್ ಫ್ಯಾಷನ್ಸ್ ಎಂಬ ಸಿದ್ಧ ಉಡುಪು ಕಾರ್ಖಾನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಕುಸಿದಿದೆ ಎನ್ನುವ ನೆಪ ಹೇಳಿ ಏಕಾಏಕಿ ಬಂದ್ ಮಾಡಿದೆ. ಕಾರ್ಮಿಕರಿಗೆ ಕಾರ್ಮಿಕ ನಿಯಮಗಳ ಪ್ರಕಾರ ಕೊಡಬೇಕಾದ ಹಣವನ್ನೂ ನೀಡದೇ ಬಂದ್ ಮಾಡಿರುವುದರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.

ತಿಂಗಳುಗಟ್ಟಲೆ ಕಾರ್ಮಿಕರು ಶಾಂತ ರೀತಿಯಿಂದ ಪ್ರತಿಭಟಿಸುತ್ತಿದ್ದರೂ ಕ್ಯಾರೇ ಅನ್ನದ ಸರ್ಕಾರಗಳು, ಮಂತ್ರಿಗಳು ಕಾರ್ಮಿಕರ ಹೋರಾಟ ತೀವ್ರ ಸ್ವರೂಪಕ್ಕೆ ತಿರುಗಿದ ತಕ್ಷಣ ರೈತರನ್ನು, ಕಾರ್ಮಿಕರನ್ನು ಕಳ್ಳರು, ರಾಷ್ಟ್ರದ್ರೋಹಿಗಳು ಎಂದು ಬಿಂಬಿಸಿ ಪೊಲೀಸರ ಮೂಲಕ ಇಲ್ಲ ಸಲ್ಲದ ಪ್ರಕರಣಗಳನ್ನು ದಾಖಲಿಸಿ ಗೂಂಡಾಗಿರಿ ನಡೆಸುತ್ತಿವೆ ಎಂದು ಆರೋಪಿಸಿದರು.

Exit mobile version