ಸುದೀಪ್‌ ಚಾರಿಟೇಬಲ್‌ ಸೊಸೈಟಿ ವತಿಯಿಂದ ಸಾಮೂಹಿಕ ವಿವಾಹ

ಬೆಂಗಳೂರು ಡಿ 24 : ನಟ ಕಿಚ್ಚ ಸುದೀಪ್‌ ಸೊಸೈಟಿ ವತಿಯಿಂದ ಫೆಬ್ರವರಿ 14ರಂದು ಉಚಿತ ಸಾಮೂಹಿಕ ವಿವಾಹ ನಡೆಯಲಿದೆ ಎಂದು ಸುದೀಪ್‌ ಚಾರಿಟೇಬಲ್‌ ಟ್ರಸ್ಟ್‌ ತಿಳಿಸಿದೆ. ನಟ ಸುದೀಪ್ ತಮ್ಮ ಸಾಮಾಜಿಕ ಕಾರ್ಯಗಳಿಗಾಗಿ ಕಟ್ಟಿದ ಸುದೀಪ್ ಚಾರಿಟೇಬಲ್ ಸೊಸೈಟಿ ಗೆ ಈಗ ಐದು ವರ್ಷದ ಸಂಭ್ರಮ. ತಮ್ಮ ಟ್ರಸ್ಟ್ ಗೆ ಐದು ವರ್ಷವಾಗಿರೋ ನೆನಪಿಗಾಗಿ ಚಾರಿಟೇಬಲ್ ಸೊಸೈಟಿ ವತಿಯಿಂದ ನಮ್ಮನೆ ಮದುವೆ ಹೆಸರಿನಲ್ಲಿ ಸಾಮೂಹಿಕ ವಿವಾಹಕ್ಕೆ ನಿರ್ಧರಿಸಿದ್ದಾರೆ ಸುದೀಪ್. ಐದು ಆರ್ಥಿಕವಾಗಿ ಆಶಕ್ತರಾಗಿರುವ ಜೋಡಿಗಳಿಗೆ ಸರಳವಾಗಿ ಮದುವೆ ಮಾಡಿಸಲು ಸುದೀಪ್ ಚಾರಿಟೇಬಲ್ ಸೊಸೈಟಿ ನಿರ್ಧರಿಸಿದೆ. ಇದಕ್ಕಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.

ಬಂದ ಅರ್ಜಿಗಳನ್ನು ಪರಿಶೀಲಿಸಿ ಐದು ಯೋಗ್ಯ ಜೋಡಿಗಳಿಗೆ ಸುದೀಪ್ ಸೊಸೈಟಿ ಸರಳವಾಗಿ ಯಾವುದೇ ಆಡಂಬರವಿಲ್ಲದೇ ಮದುವೆ ಮಾಡಿಸಲಿದೆ. ಜನವರಿ 2 ರೊಳಗೆ ಆಸಕ್ತರು ಅರ್ಜಿ ಸಲ್ಲಿಸ ಬಹುದಾಗಿದ್ದು , ಹೆಚ್ಚಿನ ಮಾಹಿತಿಯು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಫೇಸ್ ಬುಕ್‌ ಫೇಜ್‌ನಲ್ಲಿ ಲಭ್ಯವಿದೆ. ಮದುವೆಗೆ ಸಲ್ಲಿಸಲಾದ ಅರ್ಜಿಗಳನ್ನು ಹಾಗೂ ದಾಖಲೆಗಳನ್ನು ಪರಿಶೀಲಿಸಿ ಫೆ.14 ರಂದು ಕಿಚ್ಚ ಸೊಸೈಟಿಯಿಂದ ವಿವಾಹ ಆಯೋಜಿಸಲಾಗುತ್ತದೆ. ಆದರೆ ಇದಕ್ಕಾಗಿ ಯಾರಿಂದಲೂ ಯಾವುದೇ ಆರ್ಥಿಕ ಸಹಾಯವನ್ನು ಸೊಸೈಟಿ ಪಡೆಯುವುದಿಲ್ಲ ಎಂದು ಸೊಸೈಟಿ ಸ್ಪಷ್ಟಪಡಿಸಿದೆ.

ಕೇವಲ ಮದುವೆ ಮಾತ್ರವಲ್ಲದೇ ಕಿಚ್ಚ ಸುದೀಪ್ ಸೊಸೈಟಿ ತಮ್ಮ ಐದನೇ ವರ್ಷಾಚರಣೆಯ ಸಂದರ್ಭದಲ್ಲಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸುದೀಪ್ ಅಭಿಮಾನಿಗಳಿಗಾಗಿ ಸೊಸೈಟಿ ಔತಣಕೂಟವನ್ನು ಆಯೋಜಿಸಲು ನಿರ್ಧರಿಸಿದೆ. ಇದೇ ಮೊದಲಲ್ಲ ಇದಕ್ಕೂ ಮುನ್ನವೂ ಸುದೀಪ್ ಹಲವು ಅಶಕ್ತರಿಗೆ ಸಹಾಯ ಮಾಡಿದ್ದು ನಾಲ್ಕಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದಾರೆ. ಅಲ್ಲದೇ ಕೊರೋನಾ ಸಂದರ್ಭದಲ್ಲಿ ಅಶಕ್ತರಿಗೆ, ಸ್ಯಾಂಡಲ್ ವುಡ್ನ‌ ಹಿರಿಯ ಕಲಾವಿದರಿಗೆ ಸಹಾಯಧನ ನೀಡಿದ್ದರು.

Exit mobile version