ರೈಲು ವಿಳಂಬ ಹಿನ್ನಲೆ ಮರು ಪರೀಕ್ಷೆ ಬರೆಯಲು ಅವಕಾಶ

ಕಲಬುರಗಿ ಡಿ 20 : ರೈಲು ವಿಳಂಬದಿಂದಾಗಿ KPSC ಪರೀಕ್ಷೆ ಬರೆಯಲು ಅವಕಾಶ ವಂಚಿತರಾಗಿದ್ದ ಅಭ್ಯರ್ಥಿಗಳಿಗೆ ಮರುಪರೀಕ್ಷೆಗೆ KPSC ಅವಕಾಶ ಒದಗಿಸಿದೆ.

ಕರ್ನಾಟಕ ಲೋಕಸೇವಾ ಆಯೋಗವು ಡಿಸೆಂಬರ್ 29ಕ್ಕೆ ಮರು ಪರೀಕ್ಷೆ ನಿಗದಿಪಡಿಸಿದ್ದು, ಬೆಂಗಳೂರಿನಲ್ಲಿ ಡಿಸೆಂಬರ್ 29ರಂದು ಪರೀಕ್ಷೆ ನಡೆಯಲಿದೆ. ಡಿ.22ರೊಳಗೆ ರೈಲು ಟಿಕೆಟ್ ಸಮೇತ ದಾಖಲೆ ಸಲ್ಲಿಕೆಗೆ ಸೂಚಿಸಲಾಗಿದೆ.

ಡಿಸೆಂಬರ್ 14ರಂದು ಲೋಕೋಪಯೋಗಿ ಸಹಾಯಕ ಅಭಿಯಂತರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆದಿತ್ತು. ರೈಲು ವಿಳಂಬದಿಂದ ಸಾವಿರಾರು ಅಭ್ಯರ್ಥಿಗಳು ಪರೀಕ್ಷೆ ಬರೆಯುವುದರಿಂದ ವಂಚಿತರಾಗಿದ್ದರು. ಸಾಮಾನ್ಯ ಪತ್ರಿಕೆ ಪರೀಕ್ಷೆಗೆ ಹಾಜರಾಗದೇ ಅಭ್ಯರ್ಥಿಗಳು ಪರದಾಡಿದ್ದರು. 

ರೈಲು ಹಳಿ ಕೆಲಸ ದುರಸ್ಥಿ, ರೈಲುಗಳು ವಿಳಂಬ ಬೆಂಗಳೂರಿನ ಯಲಹಂಕ ಬಳಿ ರೈಲು ಹಳಿ ದುರಸ್ಥಿ ಕಾರ್ಯ ಇದ್ದಿದ್ದರಿಂದ ಯಲಹಂಕ ಬಳಿ ಎರಡು ಗಂಟೆ ರೈಲು ನಿಂತಲ್ಲಿಯೇ ನಿಂತಿತ್ತು. ಯಲಹಂಕ ದಾಟಿದ ಮೇಲೆ ಕೂಡ ಅನೇಕ ಕಡೆ ರೈಲು ನಿಂತಿದ್ದರಿಂದ, ನಿಗದಿತ ಸಮಯಕ್ಕಿಂತ ಐದು ಗಂಟೆ ವಿಳಂಬವಾಗಲು ಪ್ರಮುಖ ಕಾರಣವಾಗಿದೆ.

ಐದು ಗಂಟೆ ವಿಳಂಬವಾಗಿ ಕಲಬುರಗಿಗೆ ರೈಲು ಬಂದಿತು. ರೈಲ್ವೆ ಹಳಿ ಮೇಲೆಯೇ ಕುಳಿತು ಪರೀಕ್ಷಾರ್ಥಿಗಳು ಪ್ರತಿಭಟನೆ ನಡೆಸಿ ಮರು ಪರೀಕ್ಷೆಗೆ ಆಗ್ರಹಿಸಿದ್ದರು. ಸದ್ಯ ಈಗ ಡಿಸೆಂಬರ್ 29ಕ್ಕೆ ಮರು ಪರೀಕ್ಷೆ ನಿಗದಿ ಪಡಿಸಲಾಗಿದೆ.

Exit mobile version