ಶಿವಮೊಗ್ಗದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಬಿಜೆಪಿ ಹಿರಿಯ ನಾಯಕ ಕೆ.ಎಸ್‌ ಈಶ್ವರಪ್ಪ ಘೋಷಣೆ

ಬಿಜೆಪಿಯ ಹಿರಿಯ ನಾಯಕ ಕೆ.ಎಸ್‌ ಈಶ್ವರಪ್ಪ (K S Eshwarappa) ಅವರು ಲೋಕಸಭೆ ಚುನಾವಣೆಗೆ ಬಿಜೆಪಿ ಟಿಕೆಟ್‌ ಕೈ ತಪ್ಪಿರುವ ಹಿನ್ನೆಲೆ ಆಕ್ರೋಶಗೊಂಡಿದ್ದು, ಶಿವಮೊಗ್ಗದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ (B S Yadiyurappa) ಅವರ ಪುತ್ರ ಹಾಗೂ ಹಾಲಿ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಶಿವಮೊಗ್ಗ ಕ್ಷೇತ್ರಕ್ಕೆ ಟಿಕೆಟ್‌ ನೀಡಲಾಗಿದ್ದು, ಇದೀಗ ಯಡಿಯೂರಪ್ಪ ಪುತ್ರನ ವಿರುದ್ಧ ತಾನು ಸ್ಪರ್ಧಿಸುವುದಾಗಿ ಈಶ್ವರಪ್ಪ ಘೋಷಿಸಿದ್ದಾರೆ. ಶಿವಮೊಗ್ಗದಲ್ಲಿ ನಿನ್ನೆ (ಮಾ.15) ನಡೆದ ಅಭಿಪ್ರಾಯ ಸಂಗ್ರಹಣಾ ಸಭೆಯಲ್ಲಿ ಈಶ್ವರಪ್ಪ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದು, ಇದು ಉದ್ವೇಗದ ತೀರ್ಮಾನ ಅಲ್ಲ.

ಕಾಂಗ್ರೆಸ್‌ (Congress) ಪಕ್ಷದ ಕುಟುಂಬ ರಾಜಕಾರಣವನ್ನು ವಿರೋಧಿಸಿಕೊಂಡು ಬಂದಿದ್ದೆವು. ಯಡಿಯೂರಪ್ಪ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ, ಅದಕ್ಕೆ ಮನ್ನಣೆ ನೀಡುವುದು ಸರಿಯಾ? ಪಕ್ಷವನ್ನು ಕುಟುಂಬ ರಾಜಕಾರಣದ ಹಿಡಿತದಿಂದ ಬಿಡಿಸಲು ಹೋರಾಟ ಆರಂಭಿಸಿದ್ದೇನೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿಯ (BJP) ಬಿ.ವೈ.ರಾಘವೇಂದ್ರ, ಕಾಂಗ್ರೆಸ್‌ನ ಗೀತಾ ಶಿವರಾಜಕುಮಾರ್ ಅವರಿಗಿಂತ ನಾನು ಪ್ರಬಲನಾಗಿದ್ದೇನೆ.

ಪ್ರಧಾನಿ ನರೆಂದ್ರ ಮೋದಿ (Narendra Modi) ಅವರ ಪರವಾಗಿ ಚುನಾವಣೆಗೆ ನಿಲ್ಲುತ್ತಿದ್ದೇನೆ. ಬಿಜೆಪಿ ಮತ್ತೊಂದು ಕಾಂಗ್ರೆಸ್ ಪಕ್ಷ ಆಗಬಾರದೆಂದು ತಡೆಯಲು ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಬುಧವಾರ ಸಂಜೆ ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆಯಾಗಿತ್ತು. ಲೋಕಸಭೆ ಚುನಾವಣೆಗೆ ಪುತ್ರ ಕಾಂತೇಶ್‌ಗೆ ಟಿಕೆಟ್ ಕೈ ತಪ್ಪುತ್ತಿದ್ದಂತೆ ಬಿಜೆಪಿ ನಾಯಕ ಕೆ.ಎಸ್‌ ಈಶ್ವರಪ್ಪ ಸಿಡಿದೆದ್ದಿದ್ದರು. ನನ್ನ ಮಗನಿಗೆ ಟಿಕೆಟ್ ತಪ್ಪಿಸಿದ್ದು ಯಡಿಯೂರಪ್ಪ ಎಂದು ಹೇಳಿದ್ದರು.

ಯಡಿಯೂರಪ್ಪ ಅವರು ಶೋಭಾ ಕರಂದ್ಲಾಜೆ (Shobha Karandlaje), ಬಸವರಾಜ ಬೊಮ್ಮಾಯಿಗೆ ಪಟ್ಟು ಹಿಡಿದು ಟಿಕೆಟ್ ಕೊಡಿಸಿದ್ದಾರೆ. ಆದರೆ, ನನ್ನ ಮಗ ಕಾಂತೇಶ್‌ಗೆ ಅನ್ಯಾಯ ಮಾಡಿದ್ರು, ರಾಜ್ಯದಲ್ಲಿ ಒಂದು ಕುಟುಂಬದ ಕೈಯಲ್ಲಿ ಪಕ್ಷ ಸಿಲುಕಿದೆ. ಕುಟುಂಬದ ಕೈಯಿಂದ ಪಕ್ಷ ರಕ್ಷಿಸಬೇಕಿದೆ. ಶೋಭಾ ಕರಂದ್ಲಾಜೆ, ಬಸವರಾಜ ಬೊಮ್ಮಾಯಿ (Basavaraj Bommai) ಬಿಟ್ಟು ಬೇರೆ ಲಿಂಗಾಯತ ನಾಯಕರು ರಾಜ್ಯದಲ್ಲಿ ಇಲ್ವಾ? ಪಕ್ಷದ ಚುನಾವಣಾ ಸಮಿತಿಯ ಸಭೆಯಲ್ಲಿ ಹಾವೇರಿ ಟಿಕೆಟ್ ಕಾಂತೇಶ್‌ಗೆ ಕೊಡಿ ಎಂದು ಸ್ವತಃ ಬೊಮ್ಮಾಯಿ ಅವರೇ ಹೇಳಿದ್ದರು. ಆದರೂ, ಯಡಿಯೂರಪ್ಪ ಹಠ ಹಿಡಿದು ಅವರಿಗೆ ಯಾಕೆ ಟಿಕೆಟ್ ಕೊಡಿಸಿದ್ದು ಯಾಕೆ? ಎಂದು ಈಶ್ವರಪ್ಪ ಪ್ರಶ್ನಿಸಿದ್ದರು.

Exit mobile version