ಪರಿಸರ ನಿಯಮಾವಳಿ ಉಲ್ಲಂಘನೆ ಆರೋಪ: ಯತ್ನಾಳ್ ಸಕ್ಕರೆ ಕಾರ್ಖಾನೆ ಬಂದ್ ಮಾಡಲು ಆದೇಶ

Kalburgi: ಕಲಬುರಗಿ (Kalburgi) ಜಿಲ್ಲೆ ಚಿಂಚೋಳಿ ತಾಲೂಕಿನ ಚಿಮ್ಮಾಯಿದಲಾಯಿ ಗ್ರಾಮದ ಬಳಿ ಇರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಒಡೆತನದ ಸಿದ್ದ ಶ್ರೀ ಸಕ್ಕರೆ ಕಾರ್ಖಾನೆಗೆ ಬೀಗ ಹಾಕಲು ಆದೇಶ ಹೊರಡಿಸಲಾಗಿದ್ದು, ವಾಯು, ಜಲ ಕಾಯ್ದೆ ಉಲ್ಲಂಘನೆ ಆರೋಪದ ಹಿ‌ನ್ನಲೆ ಈ ಶುಗರ್ ಫ್ಯಾಕ್ಟರಿ ಬಂದ್​ಗೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶಿಸಿದೆ ಎಂದು ತಿಳಿದು ಬಂದಿದೆ.

ಬಿಜೆಪಿ (BJP) ಶಾಸಕ ಯತ್ನಾಳ್‌ ಒಡೆತನದಲ್ಲಿರುವ ಸಿದ್ಧಶ್ರೀ ಸೌಹಾರ್ದ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ವಿಷಾನಿಲ ಸೋರಿಕೆಯಿಂದ ಇಬ್ಬರು ಕಾರ್ಮಿಕರ ಸಾವಿಗೆ ಕಾರಣವಾದ ಬೀದರ್‌ ಜಿಲ್ಲೆ ಹುಮನಾಬಾದ್‌ನ ಪ್ರಸನ್ನ ಪ್ರಿ ಪ್ರೊಸೆಸಿಂಗ್‌ ಪ್ರೈವೇಟ್‌ ಲಿಮಿಟೆಡ್‌ (Prasanna Pre Processing Private Limited) ಕಾರ್ಖಾನೆಗಳನ್ನು ತಕ್ಷಣದಿಂದಲೇ ಮುಚ್ಚುವಂತೆ ಸೂಚಿಸಲಾಗಿದೆ.

ಪರಿಸರ ಮತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ (Eshwar Khandre) ಅವರು ಕಳೆದ ವಾರ ಕೆಎಸ್‌ಪಿಸಿಬಿ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದ ಬೆನ್ನಲ್ಲೇ ತುರ್ತು ಸಭೆ ನಡೆಸಿದ ಮಂಡಳಿ, ಸಕ್ಕರೆ ಕಾರ್ಖಾನೆಗಳನ್ನು ಮುಚ್ಚುವಂತೆ ನೋಟಿಸ್ (Notice) ಜಾರಿಗೊಳಿಸಿದೆ ಎಂದು ವರದಿಗಳು ಹೇಳಿವೆ.

ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ಎರಡು ಕಾರ್ಖಾನೆಗಳಲ್ಲಿ ಅವೈಜ್ಞಾನಿಕ ನಿರ್ವಹಣೆ ಸೇರಿದಂತೆ ಹಲವು ಲೋಪಗಳು ಕಂಡು ಬಂದಿವೆ ಎಂದು ಹೇಳಲಾಗಿದೆ. ಸಕ್ಕರೆ ಕಾರ್ಖಾನೆಗಳಿಗೆ ಬೀಗ ಜಡಿಯುವುದು ಮಾತ್ರವಲ್ಲದೆ, ಅವುಗಳ ನೋಂದಣಿಗೆ ಸಹಕರಿಸಿದ ಅಧಿಕಾರಿಗಳ ವಿರುದ್ದವೂ ಕ್ರಿಮಿನಲ್ (Criminal) ಪ್ರಕರಣ ದಾಖಲಿಸಲು ಕೆಎಸ್‌ಪಿಸಿಬಿ (KSPCB) ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಮಾಲಿನ್ಯ ನಿಯಂತ್ರಣ ನಿಯಮಾವಳಿಗಳನ್ನು ಗಾಳಿಗೆ ತೂರಿ ಕಾರ್ಖಾನೆ ನಡೆಸುತ್ತಿದ್ದ ಆರೋಪ ಕೇಳಿ ಬಂದಿದ್ದು, ವರದಿಗಳ ಪ್ರಕಾರ ಅನುಮತಿ ಪಡೆಯದೆ ಬಾಯ್ಲರ್ ಆರಂಭ, ಕಬ್ಬು ಅರೆಯುವಿಕೆ, ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ ಹಂತದಲ್ಲಿದ್ದರೂ ಅನುಮತಿ ಪಡೆಯದೆ ಡಿಸ್ಟಿಲರಿ ಘಟಕ ಸ್ಥಾಪಿಸಿದ್ದು ಸೇರಿದಂತೆ ಅನೇಕ ಆರೋಪಗಳು ಈ ಕಾರ್ಖಾನೆ ವಿರುದ್ದ ಕೇಳಿ ಬಂದಿವೆ.

ಭವ್ಯಶ್ರೀ ಆರ್ ಜೆ

Exit mobile version