ಕರ್ನಾಟಕ ನಮ್ಮದು, ಧರ್ಮದ ಹೆಸರಿನಲ್ಲಿ ಒಡೆಯುವ ದ್ರೋಹಿಗಳದ್ದಲ್ಲ : ಹೆಚ್.ಡಿ.ಕೆ!

kumarswamy

ಯುಗಾದಿ(Ugadi) ಸಂಭ್ರಮದ ದಿನ ಮಾಜಿ ಸಿಎಂ(Former ChiefMinister) ಕುಮಾರಸ್ವಾಮಿಯವರು(HD Kumarswamy) ಹಿಂದೂ ಸಂಘಟನೆಗಳ ವಿರುದ್ದ ಟ್ವೀಟರ್ ನಲ್ಲಿ ತೀಕ್ಷ್ಣವಾದ ವಾಗ್ದಾಳಿ ನಡೆಸಿದ್ದಾರೆ. ಸರಣಿ ಟ್ವೀಟ್ ಗಳ‌(Tweets) ಮೂಲಕ ಬಿಜೆಪಿ(BJP) ಮತ್ತು ಹಿಂದೂ ಸಂಘಟನೆಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಅವರು ಮಾಡಿರುವ ಸರಣಿ ಟ್ವೀಟ್ ಗಳ ವಿವರ ಇಲ್ಲಿದೆ ನೋಡಿ.

ಟ್ವೀಟ್ -೧ : ಯುಗಾದಿ ಪರ್ವದಿನದಂದು ನಾವೆಲ್ಲ ಒಂದು ಸಂಕಲ್ಪ ಮಾಡೋಣ. ಕರ್ನಾಟಕವು ಕರ್ನಾಟಕವಾಗಿಯೇ ಉಳಿಯಬೇಕೆಂಬ ಆಶಯದಿಂದಲೇ ಈ ಸಂಕಲ್ಪ. ಅಧಿಕಾರಕ್ಕಾಗಿ ಏನನ್ನೂ ಮಾಡಲು ಹೇಸದ ಕಿಡಿಗೇಡಿಗಳಿಗೆ, ಧರ್ಮವಿನಾಶಕ್ಕೆ ಕಂಕಣತೊಟ್ಟ ಕಿರಾತಕರಿಗೆ ಪಾಠ ಕಲಿಸುವ ಧೈರ್ಯ ಮಾಡೋಣ. ಕರ್ನಾಟಕ ನಮ್ಮದು. ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವ ದ್ರೋಹಿಗಳದ್ದಲ್ಲ

ಟ್ವೀಟ್ -೨ : ತಲೆತಲಾಂತರಗಳಿಂದ ಇಲ್ಲದ ಆಹಾರ ತಾರತಮ್ಯʼ ಈಗೇಕೆ ಬಂತು? 150 ಸ್ಥಾನಗಳ ಗುರಿ ಮುಟ್ಟಲು ರೂಪಿಸಿದ ರೋಡ್ ಮ್ಯಾಪ್ʼ ಇದೇ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಸರ್ವಸಮಾನ, ಸರ್ವಹಕ್ಕು, ಸರ್ವಕಲ್ಯಾಣ ಅಂದರೆ, `ಸರ್ವೇ ಜನಾಃ ಸುಖಿನೋ ಭವಂತುʼ ಎಂಬ ಆಶಯವುಳ್ಳ ಸಂವಿಧಾನವನ್ನೇ ಮುಗಿಸುವ ರಕ್ಕಸ ಹುನ್ನಾರಕ್ಕೆ ಇದು ನಾಂದಿಯಷ್ಟೇ.

ಟ್ವೀಟ್ – ೩ : ಅನ್ನ-ಆಹಾರದಲ್ಲಿ ಅರಾಜಕತೆ ಉಂಟು ಮಾಡಿ ಬೇಳೆ ಬೇಯಿಸಿಕೊಳ್ಳುವವರು `ಭಾರತಕ್ಕೆ ಮತ್ತು ಭಾವೈಕ್ಯ ಪರಂಪರೆಗೆ ದೊಡ್ಡ ಅಪಾಯ. ಮನಸುಗಳ ನಡುವೆ ಯುದ್ಧವನ್ನೇ ಸೃಷ್ಟಿಸುತ್ತಿರುವ ಈ ಕಿಡಿಗೇಡಿಗಳು ಯುದ್ಧೋನ್ಮಾದ ಸರ್ವಾಧಿಕಾರಿಗಳಿಗಿಂತಲೂ ವಿನಾಶಕಾರಿ. ಇದನ್ನು ಕನ್ನಡಿಗರು ಅರ್ಥ ಮಾಡಿಕೊಳ್ಳಬೇಕು.

ಟ್ವೀಟ್ – ೪ : ಕುರ್ಚಿ ಹಿಡಿಯಲು ಮನಸುಗಳನ್ನು ಮುರಿಯುತ್ತಿದ್ದಾರೆ. ನಾಳೆ ಮನೆಗಳನ್ನೂ ಒಡೆದು ಅಣ್ಣ-ತಮ್ಮ, ಅಕ್ಕ-ತಂಗಿ ನಡುವೆಯೂ ಬೆಂಕಿ ಇಟ್ಟು ಮನೆ ಮುರುಕರೂ ಆಗುತ್ತಾರೆ. ಹಿಂದುತ್ವದ ಹೆಸರೇಳಿಕೊಂಡು `ಹಿಂದುತ್ವದ ವಿನಾಶʼ ಮಾಡುತ್ತಿರುವ ಈ ನಕಲಿಗಳ ಮಾತನ್ನು ಯಾರೂ ನಂಬಬಾರದು. ಕರಪತ್ರ ಹಿಡಿದು ಬಂದರೆ ಭಾವೈಕ್ಯತೆಯ ಪಾಠ ಹೇಳಿ ಕಳಿಸಿ.

ಹೀಗೆ ಸರಣಿ ಟ್ವೀಟ್ ಗಳನ್ನು ಮಾಡುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿಯವರು ಮುಂಬರುವ ವಿಧಾನಸಭೆ ಚುನಾವಣೆಯ ಪ್ರಚಾರಕಾರ್ಯ ಪ್ರಾರಂಭಿದ್ದಾರೆ. ಬಿಜೆಪಿಯ ಬಿ ಟೀಮ್ ಎಂಬ ಅಪವಾದವನ್ನು ತೊಡೆದುಹಾಕಲು ಮತ್ತು ಅಲ್ಪಸಂಖ್ಯಾತ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಕುಮಾರಸ್ವಾಮಿಯವರು ಭಾರೀ ಪ್ರಯತ್ನಗಳನ್ನೇ ನಡೆಸಿದ್ದಾರೆ.

Exit mobile version