ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಕೆ.ವಿ. ರಾಜು ನಿಧನ

ಬೆಂಗಳೂರು ಡಿ 24 : ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಕೆ.ವಿ.ರಾಜು (67) ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಸ್ವಗೃಹದಲ್ಲೇ ಕೊನೆಯುಸಿರೆಳೆದಿದ್ದಾರೆ.

80-90ರ ದಶಕದಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದ ಕೆ.ವಿ.ರಾಜು ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಬೆಂಗಳೂರಿನ ರಾಜಾಜಿನಗರದ ನಿವಾಸದಲ್ಲಿ ಕೆ.ವಿ.ರಾಜು ಕೊನೆಯುಸಿರೆಳೆದಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ಓರ್ವ ಪುತ್ರ ಹಾಗೂ ಪುತ್ರಿಯನ್ನ ಕೆ.ವಿ.ರಾಜು ಅಗಲಿದ್ದಾರೆ.

ಕೆ.ವಿ ರಾಜು ಅವರು ಚಿತ್ರರಂಗದಲ್ಲಿ ನಿರ್ದೇಶಕ, ಬರಹಗಾರ ಮತ್ತು ಚಿತ್ರಕಥೆಗಾರರಾಗಿ ಗುರುತಿಸಿಕೊಂಡಿದ್ದರು. ಖ್ಯಾತ ನಿರ್ದೇಶಕ ಕೆವಿ ಜಯರಾಮ್ ಅವರ ಸಹೋದರರಾಗಿದ್ದ ಕೆವಿ ರಾಜು, 1982 ರಲ್ಲಿ ‘ಬಾಡದ ಹೂ’ ಚಿತ್ರದಲ್ಲಿ ತಮ್ಮ ಸಹೋದರನಿಗೆ ಸಹಾಯಕ ನಿರ್ದೇಶಕರಾಗುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. 1984 ರ ‘ಒಲವೇ ಬದುಕು’ ಮೂಲಕ ಅವರು ಬರಹಗಾರ ಹಾಗೂ ನಿರ್ದೇಶಕನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಕೆಲವೇ ವರ್ಷಗಳಲ್ಲಿ ಚಿತ್ರರಂಗದ ಹಿಟ್ ನಿರ್ದೇಶಕರಾಗಿ ಅವರು ಜನಮೆಚ್ಚುಗೆ ಪಡೆದರು. ಸಂಗ್ರಾಮ (1987), ಬಂಧ ಮುಕ್ತ (1987), ಯುದ್ಧಕಾಂಡ (1989), ಬೆಳ್ಳಿ ಮೋಡಗಳು, ಬೆಳ್ಳಿ ಕಾಲುಂಗುರ, ಮುಂತಾದ ಚಿತ್ರಗಳ ಮೂಲಕ ಅವರು ಬ್ಲಾಕ್ ಬಸ್ಟರ್ ನಿರ್ದೇಶಕ ಎಂದು ಗುರುತಿಸಿಕೊಂಡಿದ್ದರು.

ಕೆ.ವಿ. ರಾಜು ನಿರ್ದೇಶಿಸಿದ ಚಿತ್ರಗಳು :

 ‘ಹುಲಿಯಾ’, ‘ಬೆಳ್ಳಿ ಕಾಲುಂಗುರ’, ‘ನವಭಾರತ’, ‘ಇಂದ್ರಜಿತ್’ ‘ಪೋಲಿಸ್ ಲಾಕಪ್’, ‘ಬೊಂಬಾಟ್ ಹುಡುಗ’, ‘ಅಭಿಜಿತ್’, ‘ಬೆಳ್ಳಿ ಮೋಡಗಳು’, ‘ಯುದ್ಧಕಾಂಡ’, ‘ರಾಷ್ಟ್ರಗೀತೆ’, ‘ಸುಂದರಕಾಂಡ’ ಸೇರಿದಂತೆ ಹಲವು ಕನ್ನಡ ಸಿನಿಮಾಗಳನ್ನು ಕೆ.ವಿ.ರಾಜು ನಿರ್ದೇಶನ ಮಾಡಿದ್ದರು. ಕನ್ನಡ ಮಾತ್ರವಲ್ಲದೆ ಬಾಲಿವುಡ್‌ನಲ್ಲಿಯೂ ಕೆ.ವಿ.ರಾಜು ತಮ್ಮ ಛಾಪನ್ನು ಮೂಡಿಸಿದ್ದರು. ಹಿಂದಿಯಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ‘ಇಂದ್ರಜಿತ್’ ಚಿತ್ರಕ್ಕೆ ಕೆ.ವಿ.ರಾಜು ಆಕ್ಷನ್ ಕಟ್ ಹೇಳಿದ್ದರು.

ಅಂತಿಮ ದರ್ಶನ : ರಾಜಾಜಿನಗರದ ನಿವಾಸದಲ್ಲೇ ಕೆ.ವಿ.ರಾಜು ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಹರಿಶ್ಚಂದ್ರ ಘಾಟ್‌ನಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Exit mobile version