‘ಲಕ್ಷ್ಯ’ ಮುಂದಿನ ವಾರ ತೆರೆಗೆ

ಬಹುತೇಕ ಉತ್ತರ ಕರ್ನಾಟಕದವರೇ ಸೇರಿ ನಿರ್ಮಿಸಿರುವ ‘ಲಕ್ಷ್ಯ’ ಚಿತ್ರ ಮುಂದಿನವಾರ ತೆರೆಕಾಣಲಿದೆ. ರವಿ ಸಾಸನೂರ್ ಅವರು ಕಥೆ ಬರೆದು ನಿರ್ದೇಶನ ಮಾಡಿರುವ ಲಕ್ಷ್ಯ ಚಿತ್ರದ ಟ್ರೇಲರನ್ನು ನಿರ್ದೇಶಕ ಪವನ್ ಒಡೆಯರ್ ಕುಮಾರ್ ಅವರು ಬಿಡುಗಡೆಗೊಳಿಸಿದ್ದಾರೆ.

ನೈಜ ಘಟನೆಗಳನ್ನು ಆಧರಿಸಿ ‌ಒಂದು ಸೋಷಿಯಲ್ ಕಂಟೆಂಟ್ ಇಟ್ಟುಕೊಂಡು ನಿರ್ಮಾಣವಾದ ಈ ಚಿತ್ರ ಇದೇ 18ರಂದು ರಾಜ್ಯಾದ್ಯಂತ ತೆರೆಕಾಣಲಿದೆ. 2018ರಿಂದ ಮೀಡಿಯಾದಲ್ಲಿ ಕೆಲಸಮಾಡುತ್ತಿದ್ದ ರವಿ 2 ಪುಸ್ತಕಗಳನ್ನು ಕೂಡ ಬರೆದಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು “18 ವರ್ಷದ ನಂತರ ಪ್ರತಿಯೊಬ್ಬರ ಜೀವನದಲ್ಲೂ ನಡೆಯುವಂಥ ಘಟನೆಗಳೇ ಈ ಚಿತ್ರದಲ್ಲಿದ್ದು ಎಲ್ಲರಿಗೂ ಚಿತ್ರ ಕನೆಕ್ಟ್ ಆಗುತ್ತದೆ. ಚಿತ್ರದಲ್ಲಿ ಗೋಕಾಕ್ ಫಾಲ್ಸ್ ಅನ್ನು ವಿಭಿನ್ನವಾಗಿ ತೋರಿಸಿದ್ದೇವೆ. ಗೋಕಾಕ್ ಸೇರಿದಂತೆ ಬೆಳಗಾವಿ, ಸಾಂಗ್ಲಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಭ್ರಷ್ಟಾಚಾರದ ವಿಚಾರ ಇಟ್ಟುಕೊಂಡು ಮಾಡಿದಂಥ ಕಮರ್ಷಿಯಲ್ ಚಿತ್ರವಿದು” ಎಂದು ಹೇಳಿದರು.

ಮೂಡಲಮನೆ ಖ್ಯಾತಿಯ ಸಂತೋಷ್ ರಾಜ್ ಜಾವರೆ ಈ ಚಿತ್ರದ ನಾಯಕ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. 4 ವರ್ಷದ ಹಿಂದೆ ಶುರುವಾಗಿದ್ದ ಚಿತ್ರ ಇದು. ಮೂಡಲಮನೆ ಸೇರಿದಂತೆ 25 ಮೆಗಾಸೀರಿಯಲ್ ಗಳಲ್ಲೂ ಆ್ಯಕ್ಟ್ ಮಾಡಿದ್ದೇನೆ. ದುಡ್ಡಿನ ಹಿಂದೆ ಬಿದ್ದಿರುವ ವ್ಯಕ್ತಿಯಿಂದ ಇತರರಿಗೆ ಯಾವರೀತಿ ಪರಿಣಾಮ ಬೀರುತ್ತೆ. ಅದು ಆತನಿಗೆ ಹೇಗೆ ಎಫೆಕ್ಟ್ ಆಗುತ್ತೆ ಎಂಬುದನ್ನು ತುಂಬಾ ಪರಿಣಾಮಕಾರಿಯಾಗಿ ಈ ಚಿತ್ರದಲ್ಲಿ ಹೇಳಲಾಗಿದೆ ಎಂದು ಸಂತೋಷರಾಜ್ ಜಾವರೆ ಹೇಳಿಕೊಂಡರು.

ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿರುವ ನಿತಿನಾದ್ವಿ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನನ್ನದು ಪಿಕೆ ಎನ್ನುವ ಪಾತ್ರ, ಸಮಾಜದಲ್ಲಿ ಜವಾಬ್ದಾರಿ ಇರುವಂಥ ವ್ಯಕ್ತಿಗಳು ಅದನ್ನು ಮರೆತಾಗ ಅವರಿಗೆ ಬುದ್ದಿ ಕಲಿಸುವಂಥ ಪಾತ್ರ ಎಂದು ಪರಿಚಯಿಸಿಕೊಂಡರು. ಹಿರಿಯನಟಿ ಮಾಲತಿ ಶ್ರೀ ಮೈಸೂರು ಮಾತನಾಡಿ ನಾನೂ ಸಹ ಉತ್ತರ ಕರ್ನಾಟಕದವಳು, ಅದೇ ನೆಲದ ಮಹಿಳೆಯಾಗಿ ಚಿಕ್ಕ ಪಾತ್ರ ಮಾಡಿದ್ದೇನೆ ಎಂದರು. ಬೆಳಗಾವಿಯ ಪ್ರಕಾಶ ಚಿತ್ರ ಮಂದಿರದಲ್ಲಿ ನವಂಬರ್ 14ರಂದು ಬೆಳಿಗ್ಗೆ 9 ಗಂಟೆಗೆ ಈ ಚಿತ್ರದ ಪ್ರೀಮಿಯರ್ ಷೋ ನಡೆಯಲಿದ್ದು ಬಹಳಷ್ಟು ಸೆಲೆಬ್ರಿಟಿಗಳು ಹಾಜರಾಗಲಿದ್ದಾರೆ.ಜುವಿನ್ ಸಿಂಗ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಬನಹಟ್ಟಿಯ ಆನಂದ್ ಶಿವಯೋಗಪ್ಪ ಕೊಳಕಿ, ಸುಧೀರ್ ದೇವೇಂದ್ರ ಹುಲ್ಲೋಳಿ, ಶಿವಕುಮಾರ್ ಎ, ರವಿ ಸಾಸನೂರ್ ಈ ಚಿತ್ರದ ಸಹ ನಿರ್ಮಾಣ ಮಾಡಿದ್ದಾರೆ.

Exit mobile version