ಎಲ್ಲರೂ ಒಗ್ಗಟ್ಟಿನಿಂದ ಕರ್ನಾಟಕವನ್ನು ಕೊರೊನಾ ಮುಕ್ತ ರಾಜ್ಯವನ್ನಾಗಿಸೋಣ: ಸಚಿವ ಸುಧಾಕರ್

ಬೆಂಗಳೂರು, ಮಾ. 25: ರಾಜ್ಯದಲ್ಲಿ ಆತಂಕ ಸೃಷ್ಟಿಸಿರುವ ಕೊರೊನಾ‌ ಎರಡನೇ ಅಲೆ ಹಲವು ಕಟ್ಟುನಿಟ್ಟಿನ ಕ್ರಮಕ್ಕೆ ಸರ್ಕಾರ ಮುಂದಾಗಿದ್ದು, ಇದರ ನಡುವೆ ಕೊರೊನಾ ವಿರುದ್ಧ ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸೋಣ ಎಂದು ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

ಕಳೆದ ವರ್ಷ ಕೊರೊನಾ ವೈರಾಣುವಿನ ಮೊದಲ ಅಲೆ ಅಪ್ಪಳಿಸಿದಾಗ ಲಸಿಕೆ ನಮಗೆ ಒಂದು ಆಶಾಕಿರಣವಾಗಿತ್ತು. ಆದರೆ ಈಗ ಅದು ವಾಸ್ತವವಾಗಿದೆ. ಇದು ಅಷ್ಟು ಸಾಮಾನ್ಯವಾದ ವಿಷಯವಲ್ಲ, ಅಷ್ಟು ಸುಲಭದ ಕೆಲಸವೂ ಆಗಿರಲಿಲ್ಲ. ಇದರ ಹಿಂದೆ ನಮ್ಮ ವಿಜ್ಞಾನಿಗಳ ಅಚಲ ತಪಸ್ಸು, ಕಠಿಣ ಪರಿಶ್ರಮ, ನಿರಂತರ ಪ್ರಯತ್ನಗಳಿವೆ. ಉದಾಹರಣೆಗೆ ರೋಟಾ ವೈರಸ್ ಗೆ ಲಸಿಕೆ ಸಿಗಲು 29 ವರ್ಷ ಬೇಕಾಯ್ತು. ಎಬೋಲಾ ವೈರಸ್ ಗೆ ಲಸಿಕೆ ಕಂಡುಹಿಡಿಯಲು 20 ವರ್ಷ ಕಾಯಬೇಕಾಯ್ತು ಎಂದು ತಿಳಿಸಿದ್ದಾರೆ.

ಅಲ್ಲದೇ, ಕೊರೊನಾ ಲಸಿಕೆ ಬರುವ ಮುನ್ನ, ಮಂಪ್ಸ್ ವೈರಸ್ ಗೆ 4 ವರ್ಷದಲ್ಲಿ ಲಸಿಕೆ ಕಂಡುಹಿಡಿದಿದ್ದೇ ಈವರೆಗೂ ನಮಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಸಿಕ್ಕ ಲಸಿಕೆಯಾಗಿತ್ತು. ಈಗ ಕೊರೊನಾ ವೈರಸ್ ಗೆ 1 ವರ್ಷದೊಳಗೆ ಲಸಿಕೆ ಕಂಡುಹಿಡಿಯಲಾಗಿದೆ. ಇಂತಹ ಕಠಿಣ ಪರಿಶ್ರಮದ ಪ್ರತಿಫಲವಾದ ಲಸಿಕೆ ನಮಗೆ ದೊರೆತಿರುವಾಗ ಅದರ ಲಾಭ ಪಡೆಯುವುದು ನಮ್ಮೆಲ್ಲರ ಕರ್ತವ್ಯ. ಹೀಗಾಗಿ, ಲಸಿಕೆ ಪಡೆದುಕೊಂಡ ವ್ಯಕ್ತಿ ತಾನು ಸೋಂಕಿನಿಂದ ಸುರಕ್ಷಿತವಾಗುವುದರ ಜೊತೆಗೆ ಇತರರ ಸುರಕ್ಷತೆಗೂ ಸಹಕಾರಿಯಾಗುವುದರಿಂದ ಲಸಿಕೆ ಪಡೆಯುವುದು ನಮ್ಮ ಸುರಕ್ಷತೆ ಜೊತೆಗೆ ಒಂದು ಸಾಮೂಹಿಕ ಸಾಮಾಜಿಕ ಜವಾಬ್ದಾರಿಯೂ ಆಗಿದೆ.

ಆದ್ದರಿಂದ ಎಲ್ಲ ಅರ್ಹ ವ್ಯಕ್ತಿಗಳು ಈ ಕೂಡಲೇ
cowin.gov.in ಅಥವಾ ಆರೋಗ್ಯ ಸೇತು ಆಪ್ ಮೂಲಕ ನೋಂದಣಿ ಮಾಡಿಸಿಕೊಂಡು ಅಥವಾ ತಮ್ಮ ಹತ್ತಿರದ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ತಪ್ಪದೆ ಲಸಿಕೆ ಪಡೆಯಬೇಕೆಂದು ಮನವಿ ಮಾಡುತ್ತೇನೆ.

ಆ ಮೂಲಕ, ತಮ್ಮ ಮನೆಯಲ್ಲಿ, ನೆರೆಹೊರೆಯಲ್ಲಿ, ಸ್ನೇಹಿತರಲ್ಲಿ ಬಂಧು-ಬಳಗದಲ್ಲಿರುವ ಎಲ್ಲ ಅರ್ಹ ವ್ಯಕ್ತಿಗಳಿಗೆ, ಅದರಲ್ಲೂ ವಿಶೇಷವಾಗಿ ಹಿರಿಯ ನಾಗರೀಕರಿಗೆ ಮತ್ತು ಸಹ-ಅಸ್ವಸ್ಥತೆ ಹೊಂದಿರುವವರಿಗೆ ಲಸಿಕೆ ಪಡೆಯಲು ಅರಿವು ಮೂಡಿಸಿ, ಪ್ರೋತ್ಸಾಹಿಸಿ, ಸಹಾಯ ಮಾಡಿರಿ. ನಾವೆಲ್ಲರೂ ಒಗ್ಗಟ್ಟಿನಿಂದ ಕರ್ನಾಟಕವನ್ನು ಕೊರೊನಾ ಮುಕ್ತ ರಾಜ್ಯವನ್ನಾಗಿ ಮಾಡೋಣ ಎಂದು ಸರಣಿ ಟ್ವೀಟ್ ಮಾಡಿದ್ದಾರೆ.

Exit mobile version