ಸಿನಿಮಾ ಪೂರ ನಗುವಿನ ‘ಮಜಾ’, ‘ಕ್ವಾಟ್ಲೇ’ ನೀಡಿದ ಲವ್ ಮಾಕ್ಟೈಲ್ 2 ; ಸಿನಿಮಾ ಕುರಿತಾದ ವಿಮರ್ಶೆ ಹೀಗಿದೆ!

love

ಈ ಹಿಂದೆ ಲವ್ ಮಾಕ್ ಟೈಲ್ 1 ಸಿನಿಮಾ ಸಿನಿಪ್ರೇಕ್ಷೇಕರ ಮನದಲ್ಲಿ ಕೇವಲ ನೆನಪಾಗಿ ಉಳಿದುಕೊಂಡಿತ್ತು. ಆದರೆ ಇಂದು ಲವ್ ಮಾಕ್ ಟೈಲ್ 2ನೇ ಭಾಗ ಹೊರಬಂದ ಮೇಲೆ ಅದೇ ಸಿನಿಪ್ರೇಕ್ಷಕರ ಮನದಲ್ಲಿ ಶಾಶ್ವತವಾಗಿ ಬೇರೂರಿ ಕುಳಿತಿದೆ. ಹೌದು, ಅಷ್ಟೂ ಸೊಗಸಾಗಿ ಚಿತ್ರವನ್ನು ಪರದೆಯ ಮೇಲೆ ತಂದಿದ್ದಾರೆ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಜೋಡಿ. 2020 ರಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಮೊದಲನೇ ಬಾರಿಗೆ ತಮ್ಮ ಜೋಡಿಯನ್ನು ಸಿನಿಪ್ರೇಕ್ಷಕರ ಮುಂದೆ ಲವ್ ಮಾಕ್ಟೈಲ್ 1 ಸಿನಿಮಾ ನಿರ್ಮಿಸುವ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗಿಳಿದರು. ತಮ್ಮ ಜೋಡಿಯ ಕಾಂಬಿನೇಷನ್ ನಲ್ಲಿ ಮೂಡಿಬಂದ ಮೊದಲನೇ ಸಿನಿಮಾದಲ್ಲಿಯೇ ಗೆಲುವಿನ ಸವಾರಿ ಮಾಡಿತು ಈ ಜೋಡಿ. ಇಂದು ಲವ್ ಮಾಕ್ಟೈಲ್ 2 ಸಿನಿಮಾದಿಂದ ಬಾರಿ ಅಭಿಮಾನಿಗಳನ್ನು ಸಂಪಾದಿಸುವುದಲ್ಲದೆ, ಅವರ ಪ್ರೀತಿಯನ್ನು ಗರಿಷ್ಟವಾಗಿ ಸಂಪಾದಿಸುವಲ್ಲಿ ಈ ಜೋಡಿ ಯಶಸ್ವಿಯಾಗಿದೆ.

ಲವ್ ಮಾಕ್ಟೈಲ್ 1 ಮತ್ತು 2 ಸಿನಿಮಾಗಳು ಇಂದು ಎಷ್ಟು ಖ್ಯಾತಿ, ಪ್ರೀತಿ, ಅಭಿಮಾನವನ್ನು ಸಂಪಾದಿಸಿದ್ದಿಯೋ ಅಷ್ಟೇ ಪ್ರಮಾಣದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಜೋಡಿ ಕಠಿಣವಾಗಿ ಶ್ರಮಿಸಿದೆ. ಲವ್ ಮಾಕ್ಟೈಲ್ 2 ಸಿನಿಮಾ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಅವರ ಪರಿಶ್ರಮದ ಸೂರು ಎಂದೇ ಹೇಳಬಹುದು. ನಿರ್ಮಾಣ, ನಿರ್ದೇಶನ, ನೃತ್ಯ ಸಂಯೋಜನೆ, ನಟನೆ, ಕಥೆ-ಚಿತ್ರಕಥೆ-ಸಂಭಾಷಣೆ, ತಾಂತ್ರಿಕ ವಿಭಾಗ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿಯೂ ನಿರಂತರವಾಗಿ ಶ್ರಮಿಸಿದ್ದಾರೆ. ಆ ಶ್ರಮದ ಫಲವೇ ಇಂದು ಮಿಲನ ಹಾಗೂ ಡಾರ್ಲಿಂಗ್ ಕೃಷ್ಣ ಅವರಿಗೆ ವಿಶೇಷವಾದ, ಮರೆಯಲಾಗದಂತ ಯಶಸ್ಸನ್ನು ತಂದುಕೊಟ್ಟಿದೆ.

ಲವ್ ಮಾಕ್ಟೈಲ್ 1 ಭಾಗವನ್ನು ನೋಡಿದವರು, 2 ಭಾಗವನ್ನು ತಪ್ಪದೇ ನೋಡಲೇಬೇಕು! ಯಾಕೇ ಎಂದು ಕೇಳುತ್ತೀರಾ? ಅಂಥ ಅಂಶ ಈ ಬಾರಿ ಏನಿರಬಹುದು? ಮೊದಲ ಭಾಗದಲ್ಲಿ ಆದಿಯ ಜೀವನದಿಂದ ನಿಧಿಮಾ ದೂರ ಹೋಗುತ್ತಾರೆ. ನಿಧಿಮಾ ಇರುವುದಿಲ್ಲ, ಹಾಗಾದರೇ ಆದಿ ಜೋನಾ ಮದುವೆಯಾಗುತ್ತಾರೆ? ಗಡ್ಡ ಬಿಟ್ಟಿದ್ದಾರೆ ಅಂದರೆ ದೇವದಾಸ ಆಗಿದ್ದಾರೆ? ಮುಂದೇನು ಎಂಬ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಲವ್ ಮಾಕ್ಟೈಲ್ 2 ಸಿನಿಮಾ ಉತ್ತರ ನೀಡಲಿದೆ. ಈ ಸಿನಿಮಾ ಯಾಕೆ ನೀವು ನೋಡಬೇಕು? ಎಂಬ ಹಲವಾರು ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ.

ಲವ್ ಮಾಕ್ಟೈಲ್ 2 ಸಿನಿಮಾ ಯಾಕೆ ನೋಡಬೇಕು :

ಲವ್ ಮಾಕ್ಟೈಲ್ 2 ರಲ್ಲಿ ಆದಿಯ ಜೀವನದಲ್ಲಿ ಮುಂಬರುವ ದಾರಿಗಳು ಸಿನಿಮಾದ ದಿಕ್ಕನ್ನೇ ಬದಲಿಸಿದೆ. ಆದಿ ಗಡ್ಡ ಬಿಟ್ಟಿರುವ ಕಾರಣ ತಿಳಿದರೆ ಖಂಡಿತ ನೀವು ಶಾಕ್ ಆಗ್ತೀರಾ! ಈ ಬಾರಿ ಆದಿಯ ಮೊದಲ ಪ್ರೀತಿ ಜೋ ಅವರನ್ನು ಮದುವೆಯಾಗುತ್ತಾರಾ? ಜೋ ಎಂಟ್ರಿ ಹೇಗಿದೆ? ಇದೆಲ್ಲದಕ್ಕೂ ಆದಿ ಸ್ನೇಹಿತರಾದ ವಿಜ್ಜು ಮತ್ತು ಸುಷ್ಮಾ ನಿಮಗೆ ಪರಿ ಪರಿಯಾಗಿ ಪರಿಚಯಿಸುತ್ತಾ ಹೋಗ್ತಾರೆ. ಆದಿಯ ಈ ಪಯಣದಲ್ಲಿ ಯಾರ್ಯಾರು ಜೊತೆಯಾಗಿದ್ದಾರೆ, ಯಾರು ಕಾರಿನೊಳಗೆ ಕುಳಿತು ಕೊನೆಯವರೆಗೂ ಪ್ರಯಾಣಿಸಲಿದ್ದಾರೆ? ಯಾರೆಲ್ಲಾ ಮಧ್ಯದಲ್ಲೆ ಇಳಿದುಕೊಳ್ಳುತ್ತಾರೆ ಎಂಬುದನ್ನು ನೀವು ಚಿತ್ರಮಂದಿರಕ್ಕೆ ಹೋಗಿಯೇ ತಿಳಿದುಕೊಳ್ಳಬೇಕು.

ಈ ಸಿನಿಮಾ ‘ಮೈಸೂರು’ ಮತ್ತು ‘ಸಕಲೇಶಪುರ’ ಜನತೆಗೆ ಹತ್ತಿರ :

ಲವ್ ಮಾಕ್ಟೈಲ್ 1 ರಲ್ಲಿ ಅನೇಕ ಭಾಗಗಳನ್ನು ಚಿಕ್ಕಮಗಳೂರು, ಕಳಸ, ಮೈಸೂರು, ಹಸಿರನ್ನು ತುಂಬಿಕೊಂಡಿರುವ ಬೆಟ್ಟ, ಗುಡ್ಡಗಳ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿತ್ತು. ಈ ಸ್ಥಳಗಳು ಚಿತ್ರದಲ್ಲಿ ಹಾದು ಹೋದಾಗ ಸಿನಿಪ್ರೇಕ್ಷಕರ ಮನಸೂರೆಗೊಂಡಿದ್ದಂತು ನಿಜ! ಅದೇ ರೀತಿ ಈ ಬಾರಿ ಕೂಡ ಚಿಕ್ಕಮಗಳೂರಿನ ಒಂದು ಹೆಸರುವಾಸಿಯಾದ ಸ್ಥಳದಲ್ಲಿ ಚಿತ್ರೀಕರಣ ಮಾಡಲಾಗಿದೆ. ಮಲೆನಾಡಿನ ಅವಿಭಾಜ್ಯ ಭಾಗವಾದ ಸಕಲೇಶಪುರದ ಸುತ್ತಮುತ್ತ ಚಿತ್ರೀಕರಣ ಮಾಡಿದ್ದು, ಬಹುಜನರ ನೆಚ್ಚಿನ ಪ್ರೇಕ್ಷಣಿಯ ಸ್ಥಳ, ದೇವಸ್ಥಾನ ಒಂದರಲ್ಲಿ ಸಿನಿಮಾದ ಅಂತಿಮ ಘಟ್ಟವನ್ನು ಶೂಟ್ ಮಾಡಲಾಗಿದೆ.

ಈ ಸ್ಥಳದಲ್ಲಿ ಮಾಡಿರುವ ಶೂಟಿಂಗ್ ಸಾಕಷ್ಟು ಜನರಿಗೆ ಖುಷಿ ನೀಡಲಿದೆ ಎಂಬುದು ಪಕ್ಕ! ಇನ್ನು ಮೈಸೂರಿನವರಿಗೆ ಈ ಸಿನಿಮಾ ಹೆಚ್ಚು ವಿಶೇಷ ಯಾಕೆ ಎಂದರೆ, ಮೈಸೂರಿನವರ ಭಾಷೆ, ಸ್ವಭಾವ ಈ ಸಿನಿಮಾದಲ್ಲಿ ಥೇಟ್ ಹಾಗೆಯೇ ಪರಿಚಯಿಸಲಾಗಿದೆ. ಮೈಸೂರು ಜನರು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ, `ಕ್ವಾಟ್ಲೇ’ ಮಾಡುವ ಜನರು, ಕ್ವಾಟ್ಲೇ ಕೊಡುವ ಜನರು ಎಂಬುದು ಡೈಲಾಗ್ ಗಳ ಮೂಲಕ ಅನಾವರಣಗೊಂಡಿದೆ. ನಿಮ್ಮನ್ನು ನಕ್ಕು ನಗಿಸುವುದರಲ್ಲಿ ಅನುಮಾನವೇ ಇಲ್ಲ! ಒಟ್ಟಾರೆ ಲವ್ ಮಾಕ್ಟೈಲ್ 2 ಸಿನಿಮಾ ಈಗಾಗಲೇ ಗೆದಿದ್ದು, ಸಿನಿಪ್ರೇಕ್ಷಕರ ಮನ ಗೆಲ್ಲುವುದಲ್ಲದೇ, ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಅವರಿಗೆ ಮತ್ತಷ್ಟು, ಮಗದಷ್ಟು ಪ್ರೀತಿ, ಅಭಿಮಾನವನ್ನು ತಂದುಕೊಟ್ಟಿದೆ.

ಈ ಕೂಡಲೇ ನಿಮ್ಮ ಹತ್ತಿರದ ಚಿತ್ರಮಂದಿರಗಳಿಗೆ ಹೋಗಿ ಲವ್ ಮಾಕ್ಟೈಲ್ 2 ಸಿನಿಮಾ ವೀಕ್ಷಿಸಿ ಮನರಂಜನೆಯನ್ನು ಪಡೆಯಿರಿ. ಈಗಾಗಲೇ ಸಿನಿಪ್ರೇಕ್ಷೇಕರಿಂದ ಬುಕ್ ಮೈ ಶೋ ನಲ್ಲಿ 96% ರೇಟಿಂಗ್ ಪಡೆಯುವ ಮುಖೇನ ಉತ್ತಮ ಸ್ಥಾನವನ್ನು ಪಡೆದುಕೊಂಡಿದೆ. ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಜೋಡಿಯ ಪ್ರಯತ್ನಕ್ಕೆ ನಿಮ್ಮ ಮೆಚ್ಚುಗೆ ವ್ಯಕ್ತವಾಗಲಿ.

ಅತೀ ಮುಖ್ಯವಾಗಿ ಸಿನಿಪ್ರೇಕ್ಷಕರಲ್ಲಿ ಒಂದು ವಿನಂತಿ : “ಕನ್ನಡ ಸಿನಿಮಾಗಳನ್ನು ಚಿತ್ರಮಂದಿರಕ್ಕೆ ಹೋಗಿ ವೀಕ್ಷಿಸಿ, ಕನ್ನಡ ಭಾಷೆಗೆ ಮೊದಲ ಆದ್ಯತೆ ಇರಲಿ. ಚಿತ್ರಮಂದಿರಕ್ಕೆ ಹೋಗಿ ವೀಕ್ಷಿಸುವ ಮೂಲಕ ನಟ, ನಟಿ ಸೇರಿದಂತೆ ಎಲ್ಲಾ ಕಲಾವಿದರಿಗೆ, ತಂತ್ರಜ್ಞರಿಗೆ, ತೆರೆ ಹಿಂದಿನ ಶ್ರಮಿಕರಿಗೆ ಎಲ್ಲರಿಗೂ ಪ್ರೋತ್ಸಾಹ, ಗೌರವ ಸೂಚಿಸಿದಂತೆ.

Exit mobile version