LPG ದರ ಮತ್ತೆ ಏರಿಕೆ

ನವದೆಹಲಿ ಡಿ 1  : ದಿನೇ ದಿನೇ ದಿನ  ಬಳಕೆ ವಸ್ತುಗಳ ಬೆಲೆ ಏರುತ್ತಿದ್ದು, ಗ್ರಾಹಕರ ಜೇಬು ಸುಡುತ್ತಿದೆ. ಡಿಸೆಂಬರ್ ಮೊದಲ ದಿನವೇ  ಹಣದುಬ್ಬರದ ತೀವ್ರ ಹೊಡೆತವನ್ನು ಗ್ರಾಹಕರು ಅನುಭವಿಸುವಂತಾಗಿದೆ. ಪೆಟ್ರೋಲಿಯಂ ಕಂಪನಿಗಳು ಇಂದಿನಿಂದ ಗ್ಯಾಸ್  ದರವನ್ನು ಹೆಚ್ಚಿಸಿದ್ದು (LPG Price Hike), ವಾಣಿಜ್ಯ ಸಿಲಿಂಡರ್ ಬೆಲೆಯನ್ನು 100 ರೂ. ಏರಿಸಲಾಗಿದೆ.  ವಾಣಿಜ್ಯ ಸಿಲಿಂಡರ್‌ಗಳ ಬೆಲೆಯಲ್ಲಿ (Commercial Cylinder) ಹೆಚ್ಚಳವಾದ ಹಿನ್ನೆಲೆಯಲ್ಲಿ ಹೋಟೆಲ್,  ರೆಸ್ಟೋರೆಂಟ್‌ನಲ್ಲಿ ಆಹಾರ ಮತ್ತು ಪಾನೀಯಗಳ ಬೆಲೆ ಕೂಡಾ ದುಬಾರಿಯಾಗಲಿದೆ. 

ವಾಣಿಜ್ಯ ಸಿಲಿಂಡರ್ ಬೆಲೆ 2100 ರೂ. :
ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ (Commercial Cylinder) 100 ರೂಪಾಯಿ ಏರಿಕೆಯಾಗಿದೆ. ಈ ಬೆಲೆ ಏರಿಕೆ ಬಳಿಕ ದೇಶದ ರಾಜಧಾನಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆ  2101 ರೂಪಾಯಿಗೆ ಏರಿದೆ. ಈ ಹಿಂದೆ ನವೆಂಬರ್ 1 ರಂದು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು 266 ರೂ.ಗಳಷ್ಟು ಹೆಚ್ಚಿಸಲಾಗಿತ್ತು. 

ಮೆಟ್ರೋ ನಗರಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ :  
ಕಮರ್ಷಿಯಲ್ ಸಿಲಿಂಡರ್ ಬೆಲೆ 100 ರೂ.  ಏರಿಕೆಯಾದ ಬಳಿಕ ಕೋಲ್ಕತ್ತಾದಲ್ಲಿ ಸಿಲಿಂಡರ್ ಬೆಲೆ 2177 ರೂ.ಗೆ ಏರಿಕೆಯಾಗಿದ್ದು, ಮುಂಬೈನಲ್ಲಿ 19 ಕೆಜಿ ಸಿಲಿಂಡರ್ 2051 ರೂ.ಗೆ ಮಾರಾಟವಾಗುತ್ತಿದೆ. ಇನ್ನು ಚೆನ್ನೈನಲ್ಲಿ (Chennai) ಕಮರ್ಷಿಯಲ್  ಸಿಲಿಂಡರ್‌ಗೆ 2,234 ರೂಪಾಯಿ, ಬೆಂಗಳೂರಿನಲ್ಲಿ 2,110 ಪಾವತಿಸಬೇಕಾಗುತ್ತದೆ.

ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲೂ ಬೆಲೆ ತಟ್ಟಿದೆ ಬೆಲೆ ಏರಿಕೆ ಬಿಸಿ : 
ಈ ಹಿಂದೆ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಸಹ ಪೆಟ್ರೋಲಿಯಂ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿದ್ದವು. 19 ಕೆಜಿಯ ವಾಣಿಜ್ಯ ಗ್ಯಾಸ್ ಸಿಲಿಂಡರ್ ಸೆಪ್ಟೆಂಬರ್ 1 ರಂದು 43 ಮತ್ತು ಅಕ್ಟೋಬರ್ 1 ರಂದು 75 ರೂ.ಯಷ್ಟು ಹೆಚ್ಚಿಸಲಾಗಿತ್ತು. ವಾಣಿಜ್ಯ ಸಿಲಿಂಡರ್‌ನ ದರದಲ್ಲಿ ಮಾತ್ರ ಹೆಚ್ಚಳವಾಗಿದ್ದು, ಗೃಹಬಳಕೆಯ LPG ಸಿಲಿಂಡರ್‌ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂಬುದು ಇಲ್ಲಿ ಸಮಾಧಾನದ ಸಂಗತಿ.

Exit mobile version