ಬಿಜೆಪಿ ಕುತಂತ್ರ ಮಾಡಿಯೇ ಅನೇಕ ರಾಜ್ಯ ಗಳಲ್ಲಿ ಅಧಿಕಾರ ಹಿಡಿದಿದೆ : ಖರ್ಗೆ

Mallikarjun kharghe

ಕಲಬುರಗಿ : ಬಿಜೆಪಿ(BJP) ದೇಶದ ಅನೇಕ ರಾಜ್ಯಗಳಲ್ಲಿ ಕುತಂತ್ರ ಮಾಡಿಯೇ ಅಧಿಕಾರ ಹಿಡಿದಿದೆ.ಮಹಾರಾಷ್ಟ್ರದಲ್ಲಿಯೂ(Maharashtra) ಕುತಂತ್ರವನ್ನು ಮಾಡಿಯೇ ಮೈತ್ರಿ ಸರ್ಕಾರವನ್ನು ಪತನಗೊಳಿಸಿದೆ ಎಂದು ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ(Mallikarjun Kharghe) ಕಿಡಿಕಾರಿದ್ದಾರೆ.

ಕಲಬುರಗಿ(Kalburghi) ನಗರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್-ಶಿವಸೇನೆ-ಎನ್ಸಿಪಿ ನೇತೃತ್ವದ ಮೈತ್ರಿಕೂಟ ಸರ್ಕಾರ ಜನರಿಂದ ಅಧಿಕಾರ ಕಳೆದುಕೊಂಡಿಲ್ಲ. ನಾವು ಅಧಿಕಾರ ಕಳೆದುಕೊಂಡಿರುವುದು, ಬಿಜೆಪಿಯ ಕುತಂತ್ರ ರಾಜಕೀಯದಿಂದ. ಇನ್ನು ದೇಶದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಮತ್ತಷ್ಟು ಕಠಿಣವಾಗಬೇಕು. ಅಧಿಕಾರಕ್ಕಾಗಿ ಪಕ್ಷಾಂತರ ಮಾಡುವ ಶಾಸಕರಿಗೆ ಕಠಿಣ ಶಿಕ್ಷೆಯಾಗಬೇಕು. ಈ ನಿಟ್ಟಿನಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಬಲಪಡಿಸಲು ಎಲ್ಲ ಪಕ್ಷಗಳು ಒಂದಾಗಿ ಹೋರಾಡಬೇಕಿದೆ ಎಂದು ತಿಳಿಸಿದರು.

ಇನ್ನು ಬಿಜೆಪಿಯ ಕುತಂತ್ರದಿಂದ ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಸೇರಿದಂತೆ ಅನೇಕ ಪ್ರಾದೇಶಿಕ ಪಕ್ಷಗಳು ಅಧಿಕಾರ ಕಳೆದುಕೊಂಡಿವೆ. ಇದು ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಹೊಡೆತವಾಗಲಿದೆ. ಬಿಜೆಪಿಯವರಿಗೆ ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಬಂದಿದ್ದರೂ ಮತ್ತು ಅನೇಕ ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದರೂ ತೃಪ್ತಿಯಿಲ್ಲ. ಎಲ್ಲ ರಾಜ್ಯಗಳಲ್ಲಿಯೂ ತಾವೇ ಅಧಿಕಾರ ನಡೆಸಬೇಕೆಂಬ ಅಧಿಕಾರ ದಾಹದಿಂದ ಕುತಂತ್ರ ನಡೆಸಿ, ಸರ್ಕಾರಗಳನ್ನು ಉರುಳಿಸುತ್ತಿದ್ದಾರೆ ಎಂದು ಟೀಕಿಸಿದರು.

ಇದೇ ವೇಳೆ ಉದಯಪುರದಲ್ಲಿ ಕನ್ಹಯ್ಯ ಲಾಲ್‌ಹತ್ಯೆಯ ಕುರಿತು ಪ್ರತಿಕ್ರಿಯಿಸಿದ ಅವರು, ಈ ಹತ್ಯೆಯನ್ನು ಕಾಂಗ್ರೆಸ್‌ ಪಕ್ಷ ಖಂಡಿಸುತ್ತದೆ. ಈ ರೀತಿಯ ಧಾರ್ಮಿಕ ಹತ್ಯೆಗಳನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಈ ರೀತಿಯ ತಪ್ಪುಗಳನ್ನು ಯಾರೇ ಮಾಡಲಿ, ಯಾವ ಜಾತಿ, ಪಂಗಡದವರೇ ಮಾಡಲಿ, ಅಂತವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

Exit mobile version