ಮಂಡಗದ್ದೆ ಪಕ್ಷಿಧಾಮ‌ ಇನ್ಮುಂದೆ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ಪಕ್ಷಿಧಾಮ -ಸಿಎಂ ಘೋಷಣೆ

ಬೆಂಗಳೂರು ಅ 23: ಶಿವಮೊಗ್ಗ‌ದ ತೀರ್ಥಹಳ್ಳಿ‌ಯ ರಾಷ್ಟ್ರೀಯ ಹೆದ್ದಾರಿ – 169 ರ ಸಮೀಪದಲ್ಲಿ ತುಂಗಾ ತೀರದಲ್ಲಿರುವ ಮಂಡಗದ್ದೆ ಪಕ್ಷಿಧಾಮ‌ವನ್ನು ಅಧಿಕೃತ ಪಕ್ಷಿಧಾಮ ಎಂದು ಘೋಷಣೆ ಮಾಡಲು ಅಧಿಸೂಚನೆ ಹೊರಡಿಸಲು ಪ್ರವಾಸೋದ್ಯಮ ಇಲಾಖೆಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.

ಈ ಸಂಬಂಧ ತೀರ್ಥಹಳ್ಳಿ ಶಾಸಕರೂ ಆದ, ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಪ್ರವಾಸೋದ್ಯಮ ಹಿತದೃಷ್ಟಿಯಿಂದ ಮಂಡಗದ್ದೆ ಪಕ್ಷಿಧಾಮ‌ವನ್ನು ಅಧಿಕೃತ ಪಕ್ಷಿಧಾಮ ಎಂದು ಘೋಷಿಸುವಂತೆ ಕೋರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಮುಖೇನ ಮನವಿ ಮಾಡಿಕೊಂಡಿದ್ದರು.

ಈ ಮನವಿಯನ್ನು ಪರಿಗಣಿಸಿರುವ ಸಿಎಂ ಬೊಮ್ಮಾಯಿ ಪ್ರವಾಸೋದ್ಯಮ ಇಲಾಖೆ‌ಗೆ ಈ ಪಕ್ಷಿಧಾಮ‌ವನ್ನು ಅಧಿಕೃತ ಪಕ್ಷಿಧಾಮವಾಗಿ ಘೋಷಣೆ ಮಾಡುವಂತೆ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿ‌ಗಳ ಪ್ರಧಾನ ಕಾರ್ಯದರ್ಶಿ‌ಗಳು ಈ ಸಂಬಂಧ ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ‌ಗಳಿಗೆ ಪತ್ರ ಬರೆದು, ಅಧಿಕೃತ ಪಕ್ಷಿಧಾಮವಾಗಿ ಘೋಷಣೆ ಮಾಡುವಂತೆ ಸೂಚಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು, ʼತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಮಂಡಗದ್ದೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ-169 ರ ಪಕ್ಕದ ಅರಣ್ಯ ಭೂಮಿಯಲ್ಲಿರುವ ಪಕ್ಷಿಧಾಮವನ್ನು ಪ್ರವಾಸೋದ್ಯಮದ ಹಿತದೃಷ್ಟಿಯಿಂದ ಅಧಿಕೃತ ಪಕ್ಷಿಧಾಮವಾಗಿ ಘೋಷಿಸಬೇಕೆಂದು ಕೋರಿ ಮಾನ್ಯ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದು, ಮುಖ್ಯಮಂತ್ರಿಗಳು ಮನವಿಗೆ ಸ್ಪಂದಿಸಿದ್ದಾರೆ. ಈ ಪಕ್ಷಿಧಾಮಕ್ಕೆ ಅನೇಕ ಪ್ರವಾಸಿಗರು ಬರುತ್ತಿದ್ದು, ಅಧಿಕೃತ ಪಕ್ಷಿಧಾಮವೆಂದು ಘೋಷಿಸಿದರೆ, ಪ್ರವಾಸೋದ್ಯಮದ ಬೆಳವಣಿಗೆ ಸಾಧ್ಯವಾಗಲಿದೆ ಎಂದು ಕೋರಲಾಗಿದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಮಾನ್ಯ ಮುಖ್ಯಮಂತ್ರಿಗಳಿಗೆ ಅನಂತ ಧನ್ಯವಾದಗಳು.ʼ ಎಂದಿದ್ದಾರೆ.

Exit mobile version