ಮಂಸೋರೆಯಿಂದ `ಅಬ್ಬಕ್ಕ’ ಸಿನಿಮಾ

ನಿರ್ದೇಶಕ ಮಂಸೋರೆ'ಯವರು ಮಾಡುವ ಪ್ರತಿಯೊಂದು ಚಿತ್ರವು ಕೂಡ ವಿಭಿನ್ನವಾಗಿರುತ್ತದೆ. ಅಂದರೆ ತಮ್ಮನ್ನು ಯಾವುದೇ ಒಂದು ಜಾನರ್‌ಗೆ ಸೇರಿಸದಂಥ ಮಾದರಿಯ ಚಿತ್ರಗಳನ್ನು ಮಾಡುತ್ತಾ ಅವರು ಬಂದಿದ್ದಾರೆ. ತಂದೆ ಮಗನ ಪ್ರೀತಿಯ ಬಗ್ಗೆ ಹೇಳುವಹರಿವು’ ಎನ್ನುವ ಮೊದಲ ಚಿತ್ರದಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದ ಇವರು, ಬಳಿಕ ನಿರ್ದೇಶಿಸಿದ್ದು ಗಂಡ ಹೆಂಡತಿ ಮತ್ತು ಸಂಬಂಧಗಳ ಕುರಿತಾದ ಕತೆಯುಳ್ಳ ನಾತಿ ಚರಾಮಿ’ ಚಿತ್ರವನ್ನು. ಪ್ರಸ್ತುತ ‘ಆಕ್ಟ್1978′ ಎನ್ನುವ ಕ್ರೈಂ ಥ್ರಿಲ್ಲರ್ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಸಂದರ್ಭದಲ್ಲೇ ಮತ್ತೊಂದು ಐತಿಹಾಸಿಕ ಚಿತ್ರವನ್ನು ಆಯ್ಕೆ ಮಾಡಿರುವುದಾಗಿ ಘೋಷಿಸಿದ್ದಾರೆ. ಚಿತ್ರದ ಹೆಸರುಅಬ್ಬಕ್ಕ.’

`ಉಳ್ಳಾಲದ ರಾಣಿ ವೀರ ವನಿತೆ ಅಬ್ಬಕ್ಕ’ ಇತಿಹಾಸ ಮರೆಯದ ಸ್ವಾತಂತ್ರ್ಯ ಹೋರಾಟಗಾರ್ತಿ. ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ ಕೂಡ ಹೌದು. ಮಂಗಳೂರಿನಲ್ಲಿ ನೇತ್ರಾವತಿ ನದೀ ತೀರದಲ್ಲೇ ಇರುವ ಗ್ರಾಮ ಉಳ್ಳಾಲ. ಅದನ್ನು ರಾಜಧಾನಿಯಾಗಿ ಮೆರೆದ ಅಬ್ಬಕ್ಕ ಪೋರ್ಚುಗೀಸರೊಡನೆ ಹೋರಾಡಿದ ಕಾರಣದಿಂದ ಮಾತ್ರವಲ್ಲ, ಕುಟುಂಬವನ್ನು ನಿಭಾಯಿಸಿದ ಕಾರಣದಿಂದಲೂ ಹೆಸರಾದವಳು. ಮಂಗಳೂರಿನ ಬಂದರು ವ್ಯಾಪಾರದ ಮೇಲೆ ಅಧಿಕಾರ ಇರಿಸಿಕೊಂಡವಳು. ಇಂಥ ಅಬ್ಬಕ್ಕನ ಬಗ್ಗೆ ಸಿನಿಮಾ ಮಾಡುವುದು ಎಂದರೆ ಈಗಾಗಲೇ ಕರಾವಳಿಯಲ್ಲಿ ಚಲಾವಣೆಯಲ್ಲಿರುವ ನಾಟಕಗಳನ್ನು ಆಧಾರಿಸಿ ಮಾಡಿದರೆ ಸಾಕಾಗುವುದಿಲ್ಲ. ಅದರಲ್ಲಿಯೂ ಮಂಸೋರೆಯವರು ಚಿತ್ರವನ್ನು ಕನ್ನಡ, ತುಳು, ತಮಿಳು, ತೆಲುಗು,ಮಲಯಾಳಂ ಮತ್ತು ಹಿಂದಿಯಲ್ಲಿ ತರುವ ಯೋಜನೆ ಹಾಕಿದ್ದಾರೆ. ಒಟ್ಟಿನಲ್ಲಿ ಬಹುಕೋಟಿ ಬಜೆಟ್‌ ಇರುವ ಬೃಹತ್ ಚಿತ್ರವಾಗಿ ಮೂಡಲಿರುವುದು ಖಚಿತ. ಚಿತ್ರಕ್ಕಾಗಿ ಈಗಾಗಲೇ ನಾಲ್ಕು ವರ್ಷಗಳ ಅಧ್ಯಯನ ನಡೆಸಿರುವ ಮಂಸೋರೆ ಸಿನಿಮಾ ತೆರೆಗ ತರಲು ಇನ್ನೂ ಮೂರು ವರ್ಷಗಳ ಕಾಲಾವಧಿ ಇರುವುದಾಗಿ ಸೂಚಿಸಿದ್ದಾರೆ.

ಯಾವ ಜಾನರ್ ಸಿನಿಮಾ ಮಾಡಿದರೂ ಅದರಲ್ಲಿ ಸಾಮಾಜಿಕ ಕಳಕಳಿಯ ಅಂಶವನ್ನು ಮರೆಯದೇ ತುಂಬುವುದು ನಿರ್ದೇಶಕ ಮಂಸೋರೆಯ ವಿಶೇಷ. ಹಾಗಾಗಿ ಇದು ಯುದ್ಧದ ಚಿತ್ರವಾದರೂ ಇಲ್ಲಿಯೂ ಮಂಗಳೂರು ಕರಾವಳಿಯ ಸಾಮಾಜಿಕ ಸಂಬಂಧಗಳ ಅನಾವರಣ ಆಗಲಿದೆಯೆನ್ನುವ ಭರವಸೆ ನಮ್ಮೆಲ್ಲರದ್ದು.

Exit mobile version