ಮಾರ್ಚ್ ಒಳಗೆ ಗುರಿಮುಟ್ಟಿ; ಬೆಂಗಳೂರು ಡಿಸಿಸಿ ಬ್ಯಾಂಕ್ ಗೆ ಸಚಿವ ಸೋಮಶೇಖರ್ ಸೂಚನೆ

ಹೊಸಕೋಟೆ, ಜ. 21: ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ., ಹೊಸಕೋಟೆ ಹಾಗೂ ದೇವನಹಳ್ಳಿ ಶಾಖೆಗಳಿಗೆ ಭೇಟಿ ನೀಡಿದ ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್, ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ, ಪ್ರಗತಿ ಪರಿಶೀಲನೆ ನಡೆಸಿದರು.

ಡಿಸಿಸಿ ಬ್ಯಾಂಕ್ ಮುಖಾಂತರ ಯಾವ ಯಾವ ಸಾಲಗಳನ್ನು ನೀಡಲಾಗುತ್ತಿದೆ? ಬಡವರ ಬಂಧು, ಕಾಯಕ, ಎಸ್ಸಿಎಸ್ಟಿ ಯೋಜನೆಯಡಿ ಸಾಲ ನೀಡಿಕೆ ಹಾಗೂ ಮರುಪಾವತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಬೆಂಗಳೂರಿನ ಚಾಮರಾಜನಗರದಲ್ಲಿರುವ ಡಿಸಿಸಿ ಬ್ಯಾಂಕ್ ಒಟ್ಟಾರೆಯಾಗಿ ವಿತರಣೆ ಮಾಡಿರುವ ಸಾಲ, ಮರುಪಾವತಿ ಹಾಗೂ ಹಾಕಿಕೊಂಡಿರುವ ಗುರಿಗಳ ಬಗ್ಗೆ ಸಚಿವರು ಮಾಹಿತಿ ಕೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬ್ಯಾಂಕ್ ಅಧಿಕಾರಿಗಳು, ಪ್ರಸಕ್ತ ಸಾಲಿನಲ್ಲಿ 1 ಲಕ್ಷ ಮಂದಿಗೆ 550 ಕೋಟಿ ರೂಪಾಯಿ ಸಾಲ ನೀಡಬೇಕೆಂಬ ಗುರಿ ಹೊಂದಲಾಗಿತ್ತು. ಈವರೆಗೆ 80060 ರೈತರಿಗೆ
421 ಕೋಟಿ ರೂಪಾಯಿ ಸಾಲ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದೇ ಮಾರ್ಚ್ ಒಳಗೆ ಹಾಕಿಕೊಂಡ ಗುರಿ ಮುಟ್ಟುವ ಮೂಲಕ ಶೇ.100ರಷ್ಟು ಸಾಲ ವಿತರಣೆಯಾಗಬೇಕು. ಹೊಸ ಕೋಟೆ ಡಿಸಿಸಿ ಬ್ಯಾಂಕ್ ಉತ್ತಮ ಗುರಿಯನ್ನು ಮುಟ್ಟಿದೆ. ಇದೇ ರೀತಿಯಾಗಿ ಮುಂದೆಯೂ ಕೆಲಸ ಮಾಡಲಿ ಎಂದು ಹೇಳಿದರು.

ಹೊಸಕೋಟೆ ಡಿಸಿಸಿ ಬ್ಯಾಂಕ್ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ನೂರಕ್ಕೆ ನೂರರಷ್ಟು ಮರುಪಾವತಿಯಾಗುತ್ತಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ಸಂತಸ ವ್ಯಕ್ತಪಡಿಸಿದರು.

Exit mobile version