ಜೆಡಿಎಸ್‍ನಲ್ಲಿ ಕಾರ್ಯಕರ್ತರಿಗೆ ಬೆಲೆಯಿಲ್ಲ, ಹಣವಿದ್ದವರಿಗೆ ಮಾತ್ರ ಟಿಕೆಟ್ : ಜೆಡಿಎಸ್ ಎಂಎಲ್‍ಸಿ!

JDS

ಜೆಡಿಎಸ್ ಪಕ್ಷದಲ್ಲಿ(JDS Party) ಕಾರ್ಯಕರ್ತರಿಗೆ ಬೆಲೆಯಿಲ್ಲ. ಹಣವಿದ್ದವರಿಗೆ ಮಾತ್ರ ಟಿಕೆಟ್ ನೀಡಲಾಗುತ್ತದೆ. ನೀವು ಕಾರ್ಯಕರ್ತರಾಗಿ ಎಷ್ಟೇ ಕೆಲಸ ಮಾಡಿದ್ರು, ಹಣ ಇಲ್ಲ ಅಂದ್ರೆ ನಿಮಗೆ ಟಿಕೆಟ್ ಸಿಗೋಲ್ಲ ಎಂದು ಜೆಡಿಎಸ್ ಎಂಎಲ್‍ಸಿ(JDS MLC) ಮರಿತಿಬ್ಬೇಗೌಡ(Marithibbegowda) ಸ್ವಪಕ್ಷದ ವಿರುದ್ದ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದಾರೆ.

ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಗೆ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದ ಕಿಲಾರ ಜಯರಾಂ ಅವರಿಗೆ ಟಿಕೆಟ್ ಕೇಳಿದ್ದಕ್ಕೆ, ಆತನ ಬಳಿ ಹಣವಿಲ್ಲ. ಆತನಿಗೆ ಟಿಕೆಟ್ ನೀಡಿ ಏನು ಪ್ರಯೋಜನ ಎಂದು ಆತನಿಗೆ ಟಿಕೆಟ್ ನೀಡಲು ನಿರಾಕರಿಸಿದ್ದರು ಎಂದು ಜೆಡಿಎಸ್ ವರಿಷ್ಠರ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. ದಕ್ಷಿಣ ಪದವೀಧರ ಕ್ಷೇತ್ರದ ಟಿಕೆಟ್ ಅನ್ನು ಎಂದಿಗೂ ಪಕ್ಷದ ಬಾವುಟ ಹಿಡಿಯದ ಹೆಚ್.ಕೆ ರಾಮುಗೆ ನೀಡಿದ್ದಾರೆ. ಆತ ಎಂದಿಗೂ ಪಕ್ಷದ ಬಾವುಟ ಹಿಡಿದು ಕೆಲಸ ಮಾಡಿಲ್ಲ.

ಆದರೆ ಹಣವಿದೆ ಎಂಬ ಒಂದೇ ಕಾರಣಕ್ಕೆ ಆತನಿಗೆ ಟಿಕೆಟ್ ನೀಡಿದ್ದಾರೆ. ಜೆಡಿಎಸ್‍ನಲ್ಲಿ ಕಾರ್ಯಕರ್ತನಾಗಿ ಎಷ್ಟೇ ಕೆಲಸ ಮಾಡಿದರು, ಟಿಕೆಟ್ ಮಾತ್ರ ಸಿಗುವುದಿಲ್ಲ. ಚುನಾವಣೆ ಬಂದಾಗ ಹಣವಿದ್ದವರಿಗೆ ಟಿಕೆಟ್ ಸಿಗುತ್ತದೆ. ಅವರ ಪರವಾಗಿ ಕೆಲಸ ಮಾಡುವುದು ಮಾತ್ರ ಕಾರ್ಯಕರ್ತರ ಕೆಲಸ ಎಂದು ಆಕ್ರೋಶ ಹೊರಹಾಕಿದರು. ಇನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಥಳೀಯ ಶಾಸಕರು, ಕಾರ್ಯಕರ್ತರು ಎಲ್ಲರೂ ಮಂಡ್ಯದಲ್ಲಿ ಕೆಲಸ ಮಾಡಿದರು. ಆದರೆ ದೇವೇಗೌಡರ ಕುಟುಂಬದಲ್ಲಿ ತೆಗೆದುಕೊಂಡ ನಿರ್ಣಯಗಳೇ ನಿಖಿಲ್ ಸೋಲಿಗೆ ಪ್ರಮುಖ ಕಾರಣ.

ಕುಟುಂಬ ರಾಜಕೀಯದಿಂದ ನಿಖಿಲ್ ಸೋಲು ಕಾಣಬೇಕಾಯಿತು. ಮಂಡ್ಯದಲ್ಲಿ ನಿಖಿಲ್‍ಗೆ ಟಿಕೆಟ್ ನೀಡುವುದು ಬೇಡ ಎಂದು ನಾನು ಹೇಳಿದ್ದೆ. ಆದರೆ ಕುಮಾರಸ್ವಾಮಿ ಅವರು ನಮ್ಮೆಲ್ಲರ ಮಾತು ದಿಕ್ಕರಿಸಿ ಮಗನನ್ನು ಚುನಾವಣೆಗೆ ನಿಲ್ಲಿಸಿದರು. ಕುಟುಂಬ ರಾಜಕೀಯವನ್ನು ದಿಕ್ಕರಿಸಿದ ಮತದಾರರು ನಿಖಿಲ್‍ನನ್ನು ಸೋಲಿಸಿದರು.

Exit mobile version