ಏರ್‌ ಇಂಡಿಯಾದ ಮೇಲೆ ಬೃಹತ್‌ ಸೈಬರ್‌ ದಾಳಿ; 45 ಲಕ್ಷ ಪ್ರಯಾಣಿಕರ ಮಾಹಿತಿ ಸೋರಿಕೆ

ನವದೆಹಲಿ, ಮೇ. 22: ಸರ್ಕಾರಿ ಸ್ವಾಮ್ಯದ ಏರ್‌ಇಂಡಿಯಾದ ಮೇಲೆ ಬೃಹತ್ ಸೈಬರ್ ದಾಳಿ ನಡೆದಿದ್ದು, ಸುಮಾರು 45 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರ ವೈಯಕ್ತಿಕ ಮಾಹಿತಿ ಹ್ಯಾಕ್ ಮಾಡಲಾಗಿದೆ. ಇದರಿಂದಾಗಿ ಲಕ್ಷಾಂತರ ಪ್ರಯಾಣಿಕರ ವೈಯಕ್ತಿಕ ವಿವರಗಳನ್ನು ಕಳವು ಮಾಡಲಾಗಿದೆ. ಕದ್ದ ದತ್ತಾಂಶವು ಪಾಸ್‌ಪೋರ್ಟ್ ಮತ್ತು ಪ್ರಯಾಣಿಕರ ಕ್ರೆಡಿಟ್ ಕಾರ್ಡ್ ವಿವರಗಳಂತಹ ಸೂಕ್ಷ್ಮ ಮಾಹಿತಿಯನ್ನು ಒಳಗೊಂಡಿದೆ ಎಂದು ಸಂಸ್ಥೆ ಖಚಿತಪಡಿಸಿದೆ.

”ಪ್ರಯಾಣಿಕರ ಸೇವಾ ವ್ಯವಸ್ಥೆಯ ನಮ್ಮ ಡೇಟಾ ಪ್ರೊಸೆಸರ್ (ಪ್ರಯಾಣಿಕರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವ ಮತ್ತು ಸಂಸ್ಕರಿಸುವ ಜವಾಬ್ದಾರಿಯನ್ನು ಹೊಂದಿರುವ) ಸಿಟಾ ಪಿಎಸ್‌ಎಸ್ ಮೇಲೆ ಸೈಬರ್ ಕಳ್ಳರು ದಾಳಿ ಮಾಡಿದ್ದಾರೆ. ಇದು ಕೆಲವು ಪ್ರಯಾಣಿಕರ ವೈಯಕ್ತಿಕ ಡೇಟಾ ಸೋರಿಕೆಗೆ ಕಾರಣವಾಗುತ್ತದೆ. ಈ ಘಟನೆಯು ವಿಶ್ವದ ಸುಮಾರು 4,500,000 ದತ್ತಾಂಶದ ಮೇಲೆ ಪರಿಣಾಮ ಬೀರಿದೆ “ಎಂದು ಸಂಸ್ಥೆಯ ಹೇಳಿಕೆಯಲ್ಲಿ ತಿಳಿಸಿದೆ. ಈ ಡೇಟಾ ಸೋರಿಕೆಯಲ್ಲಿ ಪ್ರಯಾಣಿಕರ ಹೆಸರು, ಹುಟ್ಟಿದ ದಿನಾಂಕ, ಅಡ್ರೆಸ್‌, ಪಾಸ್‌ಪೋರ್ಟ್‌ ಮಾಹಿತಿ, ಟೆಕೆಟ್ ಮಾಹಿತಿ, ಕ್ರೆಡಿಟ್-ಡೆಬಿಟ್ ಕಾರ್ಡ್ ಡೇಟಾ ಸೇರಿದೆ.

ಡೇಟಾ ಭದ್ರತಾ ಲೋಪದ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ಆರಂಭಿಸಲಾಗಿದೆ. ಸೈಬರ್ ದಾಳಿಗೊಳಗಾದ ಸರ್ವರ್‌ಗಳನ್ನು ಭದ್ರಪಡಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಅಲ್ಲದೆ, ದತ್ತಾಂಶ ಭದ್ರತಾ ಲೋಪದ ಬಗ್ಗೆ ಪರಿಶೀಲನೆಗೆ ಬಾಹ್ಯ ತಜ್ಞರನ್ನು ತೊಡಗಿಸಿಕೊಂಡಿದ್ದು, ಈ ಬಗ್ಗೆ ಗ್ರಾಹಕರಿಗೆ ತಿಳಿಸಲು ಕ್ರೆಡಿಟ್ ಕಾರ್ಡ್‌ ನೀಡಿರುವ ಬ್ಯಾಂಕ್‌ಗಳಿಗೆ ಮಾಹಿತಿ ತಲುಪಿಸಿಲಾಗಿದೆ ಎಂದು ಏರ್‌ಇಂಡಿಯಾ ಹೇಳಿದೆ.

ಇದೇ ವೇಳೆ ಏರ್‌ಇಂಡಿಯಾ ವೆಬ್‌ಸೈಟ್ ಮತ್ತು ಇನ್ನೆಲ್ಲಿಯಾದರೂ ಇದಕ್ಕೆ ಅನ್ವಯವಾಗುವ ಪಾಸ್‌ವರ್ಡ್‌ಗಳನ್ನು ಹೊಂದಿದ್ದರೆ ಕೂಡಲೇ ಬದಲಾಯಿಸುವಂತೆ ಪ್ರಯಾಣಿಕರಿಗೆ ಏರ್‌ಇಂಡಿಯಾ ಕೇಳಿಕೊಂಡಿದೆ.

Exit mobile version