ಮತ್ತೆ `ರಾಜು ಕನ್ನಡ ಮೀಡಿಯಂ’

ಬೆಳ್ಳಿತೆರೆಯ ಮೇಲೆ ಸದ್ದು ಮಾಡಿದ ಚಿತ್ರ `ರಾಜು ಕನ್ನಡ ಮೀಡಿಯಂ’. ಆದರೆ ಕಿರುತೆರೆಯ ವಿಚಾರಕ್ಕೆ ಬಂದರೆ ಅದಕ್ಕೆ ಒಂದು ತಡೆಯಾಗಿತ್ತು. ಪ್ರಸ್ತುತ ಆ ತಡೆಯನ್ನು ಕಾನೂನು ಪ್ರಕಾರ ನಿವಾರಣೆ ಮಾಡಿಕೊಂಡು ವರ್ಷಾಂತ್ಯದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳಲು ಸಿದ್ಧಗೊಂಡಿದೆ.

ಗುರು ನಂದನ್ ನಾಯಕರಾಗಿ ಅಭಿನಯಿಸಿರುವ `ರಾಜು ಕನ್ನಡ ಮೀಡಿಯಂ’ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರು ಕೂಡ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಾಯಕಿಯ ಪಾತ್ರ ನಿರ್ವಹಿಸಿದವರು ಆಶಿಕಾ ರಂಗನಾಥ್. ಈಗಾಗಲೇ ಒಮ್ಮೆ ಪ್ರಸಾರವಾಗಿದ್ದ ಚಲನಚಿತ್ರಕ್ಕೆ ವಿತರಕ ಜಯಣ್ಣ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ದಾವೆ ಹೂಡಿ ಇದುವರೆಗೆ ಪ್ರಸಾರವಾಗದಂತೆ ತಡೆಹಿಡಿದಿದ್ದರು. ‘ರಾಜು ಕನ್ನಡ ಮೀಡಿಯಂ’ ಚಿತ್ರದ ನಿರ್ಮಾಪಕ ಕೆ.ಎ ಸುರೇಶ್ ಮತ್ತು ಜೀ ವಾಹಿನಿಗೆ ಸಿನಿಮಾ ಮತ್ತೊಮ್ಮೆ ಪ್ರಸಾರ ಮಾಡದಂತೆ ಕೋರ್ಟ್‌ನಿಂದ ಮಧ್ಯಂತರ ಆದೇಶ ತರಲಾಗಿತ್ತು. ಎರಡು ವರ್ಷಗಳ ಕಾಲ ನಡೆದ ವಾದ, ಪ್ರತಿವಾದದ ಬಳಿಕ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರು ಜಯಣ್ಣ ನೀಡಿರುವ ದಾಖಲೆ ಹಾಗೂ ಸಾಕ್ಷ್ಯ ಸರಿ ಇಲ್ಲವೆಂದು ಮಧ್ಯಂತರದ ಅರ್ಜಿ ವಜಾಗೊಳಿಸಿದ್ದಾರೆ. ಹಾಗಾಗಿ ಜಯಣ್ಣನ ವಿರುದ್ಧ ಸುರೇಶ್ ಮೊದಲ ಹಂತದ ಗೆಲುವು ಕಂಡಿದ್ದಾರೆ.

`’ನೀವು ಸಲ್ಲಿರುವ ದಾಖಲೆಯಲ್ಲಿ ನಿರ್ಮಾಪಕರೊಂದಿಗೆ ಸುದೀಪ್ ಅಗ್ರಿಮೆಂಟ್ ಮಾಡಿಕೊಂಡಿರುವ ವಿಷಯ, ಯೂನಿಫೈ ಮಿಡಿಯಾಗೆ ಸಂಬಂಧಿಸಿದ ಹಣಕಾಸಿನ ವ್ಯವಹಾರದ ಕುರಿತಾದ ದಾಖಲೆಗಳು ತಿದ್ದಿರುವುದಾಗಿ ಕಾಣಿಸುತ್ತಿವೆ. ನೀವು ನೀಡಿರುವ ಹೇಳಿಕೆಗಳ ಪೈಕಿ ಯಾವೊಂದು ಅಂಶವೂ ನೈಜತೆಗೆ ಹತ್ತಿರ ಇರದ ಕಾರಣ ಮತ್ತು ಕಾನೂನು ಸಮ್ಮತವಲ್ಲದಷ್ಟು ಹಣ ನೀಡಿರುವುದು ನಂಬಲನರ್ಹವೆಂದು ಭಾವಿಸಿ ವಜಾಗೊಳಿಸಲಾಗಿದೆ” ಎಂದು ಒಟ್ಟು ಹದಿನಾಲ್ಕು ಪುಟಗಳ ತೀರ್ಪನ್ನು ಕಳೆದ ವಾರ ಸಿವಿಲ್ ಕೋರ್ಟ್ ಬಿಡುಗಡೆ ಮಾಡಿದ್ದು, ಜಯಣ್ಣ ಮುಖಭಂಗ ಅನುಭವಿಸುವಂತಾಗಿದೆ.
ಒಟ್ಟಿನಲ್ಲಿ ಈ ಗೆಲುವಿನಿಂದಾಗಿ ನಿರ್ಮಾಪಕ ಕೆ ಎ ಸುರೇಶ್ ಅವರು ಚಿತ್ರವನ್ನು ವಾಹಿನಿಯ ಮೂಲಕ ಪ್ರಸಾರ ಮಾಡಲು ತಯಾರಾಗಿದ್ದಾರೆ.

Exit mobile version