ವೈದೇಹಿ ಡೋಂಗ್ರೆಗೆ ಮಿಸ್‌ ಇಂಡಿಯಾ ಯುಎಸ್‌ಎ ಕಿರೀಟ

ವಾಷಿಂಗ್ಟನ್‌, ಜು. 20: ಮಿಚಿಗನ್ ನ 25 ವರ್ಷದ ವೈದೇಹಿ ಡೋಂಗ್ರೆ ಅವರು ಮಿಸ್‌ ಇಂಡಿಯಾ ಯುಎಸ್‌ಎ–2021 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ವೈದೇಹಿ ಅವರು ಮಿಚಿಗನ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದು, ಪ್ರಸ್ತುತ ವ್ಯವಹಾರ ಅಭಿವೃದ್ಧಿ ವ್ಯವಸ್ಥಾಪಕರಾಗಿ ಪ್ರಮುಖ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

ಜಾರ್ಜಿಯಾದ ಆರ್ಶಿ ಲಾಲಾನಿ ಅವರನ್ನು ಈ ಸ್ಪರ್ಧೆಯ ಪ್ರಥಮ ರನ್ನರ್ ಅಪ್‌ ಆಗಿ ಆಯ್ಕೆ ಮಾಡಲಾಗಿದ್ದು, ಅವರು ಬ್ರೈನ್ ಟ್ಯೂಮರ್ನಿಂದ ಬಳಲುತ್ತಿದ್ದಾರೆ. ಉತ್ತರ ಕ್ಯಾರೊಲಿನಾದ ಮೀರಾ ಕಸಾರಿ ಅವರು ದ್ವಿತೀಯ ರನ್ನರ್ ಅಪ್‌ ಆಗಿದ್ದಾರೆ. 1997ರ ಮಿಸ್‌ ವರ್ಲ್ಡ್‌ ಡಯಾನಾ ಹೇಡನ್ ಈ ಸ್ಪರ್ಧೆಯ ಮುಖ್ಯ ಅತಿಥಿ ಮತ್ತು ಮುಖ್ಯ ತೀರ್ಪುಗಾರ್ತಿಯಾಗಿದ್ದರು.

ಮಿಸ್‌ ಇಂಡಿಯಾ ಯುಎಸ್‌ಎ, ಮಿಸಸ್ ಇಂಡಿಯಾ ಯುಎಸ್‌ಎ ಮತ್ತು ಮಿಸ್‌ ಟೀನ್‌ ಇಂಡಿಯಾ ಯುಎಸ್‌ಎ ಸೌಂದರ್ಯ ಸ್ಪರ್ಧೆಗಳಲ್ಲಿ ಅಮೆರಿಕದ 30 ರಾಜ್ಯಗಳಿಂದ 61 ಸ್ಪರ್ಧಿಗಳು ಭಾಗವಹಿಸಿದ್ದರು.

Exit mobile version