ಅಕ್ರಮ ಮರಳು ಸಾಗಾಟ ಆರೋಪ ಕುರಿತು ಶಾಸಕ ಎಂ.ಪಿ. ಕುಮಾರಸ್ವಾಮಿ ಸ್ಪಷ್ಟನೆ

ಚಿಕ್ಕಮಗಳೂರು ಸೆ 29 ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರ ಮೇಲೆ ಅಕ್ರಮ ಮರಳು ಸಾಗಾಣಿಕೆಯ ಆರೋಪವನ್ನು ಕಾಂಗ್ರೆಸ್ ಮುಖಂಡರೊಬ್ಬರಿಂದ ಹಾಗೂ ಸ್ಥಳೀರಿಂದ ಕೇಳಿಬಂದಿತ್ತು. ಈಗ ಈ ಘಟನೆಗೆ ಸಂಬಂಧಿಸಿದಂತೆ ಸ್ವತಃ ಶಾಸಕ ಎಂ. ಪಿ ಕುಮಾರಸ್ವಾಮಿ ಅವರೇ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಶಾಸಕ ಎಂ ಪಿ ಕುಮಾರಸ್ವಾಮಿ, ನಾನು ಕೋಟ್ಯಾಂತರ ರೂಗಳ ಮನೆ ಕಟ್ಟಿಸುತ್ತಿರುವುದು ಎಲ್ಲರ ಕಣ್ಣಿಗೆ ಕಾಣಿಸುತ್ತದೆ, ರಾಜ್ಯದಲ್ಲಿರುವ ಬೇರೆ ಯಾವ ಶಾಸಕರ ಮನೆಗಳು ಸುಂದರವಾಗಿಲ್ಲ ಎಂಬುವಂತೆ ಬಿಂಬಿಸುತ್ತಿರುವುದು ಸಮಂಜಸವಲ್ಲ ಎಂದರು.

ಮನೆಕಟ್ಟಲು ಅಕ್ರಮವಾಗಿ ಮರಳು ಪಡೆಯಲಾಗಿದೆ ಎಂದು ಕೆಲವರು ಮರಳು ಹೊತ್ತು ನನ್ನ ಮನೆಗೆ ಬರುತ್ತಿರುವ ಟ್ರ್ಯಾಕ್ಟರ್ ನ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ, ಅಕ್ರಮ ಮರಳು ಸಾಗಾಟ ಮಾಡಿರುವುದು ಶುದ್ಧ ಸುಳ್ಳು. ನನ್ನ ಹೆಸರು ಹಾಳು ಮಾಡಲು  ಷಡ್ಯಂತರ ನಡೆಸಲಾಗಿದೆ ಎಂದು ಶಾಸಕ ಎಂ ಪಿ ಕುಮಾರಸ್ವಾಮಿ ಹೇಳಿದರು.

ಮನೆ ನಿರ್ಮಾಣಕ್ಕೆ ಅಕ್ರಮ ಮರಳು ಸಾಗಾಟ ಮಾಡಿದ್ದಾರೆಂದು ಆರೋಪಿಸುವ ಮುನ್ನ, ಮರಳು ಎಲ್ಲಿಂದ ತಂದಿದ್ದಾರೆಂದು  ಮೊದಲು ತಿಳಿದುಕೊಳ್ಳಬೇಕಿತ್ತು. ಪರ್ಮಿಟ್ ಇರುವ ಮರಳನ್ನು ಗುತ್ತಿಗೆದಾರರಿಂದ ಹಣಕೊಟ್ಟು ಪಡೆದಿದ್ದೇನೆ, ನಾನು ಮೂರು ಬಾರಿ ಶಾಸಕರಾದರು ಹಂಚಿನ ಮನೆಯಲ್ಲಿ ವಾಸವಿದ್ದೆ ಎಂದರು. ಹಾಗೂ ಬೇರೆ ಸಮುದಾಯದ ಜನಪ್ರತಿನಿಧಿಗಳು ಕೋಟಿಗಟ್ಟಲೆ ಹಣ ಖರ್ಚು ಮಾಡಿ ಆರ್ ಸಿ ಸಿ ಮನೆ ಕಟ್ಟಿಕೊಂಡರೆ ಅದು ಅಕ್ರಮವಲ್ಲ, ಅವರ ವಿರುದ್ಧ ಒಂದು ಮಾತು ಸಹ ಬರುವುದಿಲ್ಲ. ಆದರೆ ಪರಿಶಿಷ್ಟ ಜಾತಿಯ ಓರ್ವ ಶಾಸಕ ಆರ್ ಸಿ ಸಿ ಮನೆ ಕಟ್ಟಿಕೊಂಡರೆ ಇದು ಅಕ್ರಮ ಎನ್ನುವುದು ಸರಿಯಲ್ಲ ಎಂದು ಅವರು ಬೇಸರ ವೆಕ್ತಪಡಿಸಿದರು.

Exit mobile version