‘ಚೌರಿ ಚೌರಾ’ ಶತಮಾನೋತ್ಸವಕ್ಕೆ ಮೋದಿ ಚಾಲನೆ

ನವದೆಹಲಿ, ಪೆ. 02: ದೇಶದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಹೋರಾಟ ‘ಚೌರಿ ಚೌರಾ’ದ 100ನೇ ವರ್ಷಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಫೆ. 4ರಂದು ವಿಡಿಯೊ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡುವರು. ಈ ಹೋರಾಟದ ಸ್ಮರಣೆಗಾಗಿ ಹೊರತಂದಿರುವ ಅಂಚೆ ಚೀಟಿಗಳನ್ನು ಉದ್ಘಾಟನಾ ಸಮಾರಂಭದಲ್ಲಿಯೇ ಪ್ರಧಾನಿ ಬಿಡುಗಡೆ ಮಾಡುವರು ಎಂದು ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಪ್ರಕಟಣೆ ತಿಳಿಸಿದೆ.

‘ಈ ಹೋರಾಟದ ಶತಮಾನೋತ್ಸವದ ಅಂಗವಾಗಿ ರಾಜ್ಯದ ಎಲ್ಲ 75 ಜಿಲ್ಲೆಗಳಲ್ಲಿ ಉತ್ತರ ಪ್ರದೇಶ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಈ ಕಾರ್ಯಕ್ರಮಗಳು ಮುಂದಿನ ವರ್ಷ ಫೆ. 4ರ ವರೆಗೆ ನಡೆಯಲಿವೆ’ ಎಂದೂ ಪಿಎಂಒ ಪ್ರಕಟಣೆ ತಿಳಿಸಿದೆ.

1922ರಲ್ಲಿ ಮಹಾತ್ಮ ಗಾಂಧಿ ಅಸಹಕಾರ ಚಳವಳಿ ಆರಂಭಿಸಿದ್ದರು. ಚೌರಿಚೌರಾದಲ್ಲಿ ನಡೆದಿದ್ದ ಚಳವಳಿಯಲ್ಲಿ ಭಾಗವಹಿಸಿದ್ದವರ ಮೇಲೆ ಪೊಲೀಸರು ಗುಂಡು ಹಾರಿಸಿದಾಗ, ಕೆಲ ಹೋರಾಟಗಾರರ ಸಾವನ್ನಪ್ಪಿದ್ದರು. ಆಗ, ರೊಚ್ಚಿಗೆದ್ದ ಹೋರಾಟಗಾರರು ಚೌರಿಚೌರಾ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿ, ಅದಕ್ಕೆ ಬೆಂಕಿ ಹಚ್ಚಿದ್ದರು. ಈ ಘಟನೆಯಲ್ಲಿ, ಠಾಣೆಯಲ್ಲಿದ್ದ ಹಲವರು ಮೃತಪಟ್ಟಿದ್ದರು. ಈ ಹಿಂಸಾಚಾರ ಹಾಗೂ ಅನೇಕ ಜನರ ಸಾವಿನಿಂದ ನೊಂದ ಮಹಾತ್ಮ ಗಾಂಧಿ ತಾವು ಆರಂಭಿಸಿದ್ದ ಅಸಹಕಾರ ಚಳವಳಿಯನ್ನು ಸ್ಥಗಿತಗೊಳಿಸಿದ್ದರು.

Exit mobile version