Belagavi: ಪ್ರತಿ ಬಾರಿ ರಾಜ್ಯಕ್ಕೆ ಬಂದಾಗಲೆಲ್ಲ ಮೋದಿ ಭಯಾನಕ ಸುಳ್ಳು ಹೇಳಿ ಹೋಗುತ್ತಾರೆ. ಅದನ್ನು ಇಲ್ಲಿನ ಜನ ನಂಬುತ್ತಾರೆ. ಹೆಣ್ಮಕ್ಕಳ ತಾಳಿ, ಕೈಬಳೆ ಬಗ್ಗೆ ಸುಳ್ಳು ಹೇಳ್ಕೊಂಡು ತಿರುಗುವ ಮೋದಿಯಿಂದ ಪ್ರಧಾನಿ ಹುದ್ದೆಗೆ ಮರ್ಯಾದೆ ಬರಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ (Congress) ಅಭ್ಯರ್ಥಿಯಾದ ಪ್ರಿಯಾಂಕ ಜಾರಕಿಹೊಳಿ ಪರ ಪ್ರಚಾರದ ವೇಳೆ ಮಾತನಾಡಿದ ಅವರು, ಇಷ್ಟೊಂದು ಸುಳ್ಳು ಹೇಳೋ ಮೋದಿಗೆ ನಾಚಿಕೆನೂ ಆಗಲ್ಲ.
ಇವರಿಗೆ ಮಾನ ಮರ್ಯಾದೆನೂ ಇಲ್ಲ. ಯಪ್ಪಾ ಯಪ್ಪಾ ಯಪ್ಪಾ ಈ ಮೋದಿ ಯಾವ ಮಟ್ಟದ ಸುಳ್ಳು ಸೃಷ್ಟಿ ಮಾಡ್ತಾರಲ್ಲ ಎಂದು ಹೇಳಿದ್ದಾರೆ. ವಿದೇಶದಿಂದ ಬಂದ ಕಪ್ಪು ಹಣವನ್ನು ತಂದು ದೇಶದ ಎಲ್ಲ ಜನರ ಖಾತೆಗೆ 15 ಲಕ್ಷ ರೂ.ಹಾಕುತ್ತೇವೆ ಎಂದಿದ್ದ ಮೋದಿಯವರು ಹತ್ತು ವರ್ಷವಾದರೂ ಹಣ ಹಾಕಲಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡಿ ಯುವಜನರಿಗೆ ಕೆಲಸ ನೀಡುತ್ತೇನೆ ಎಂದಿದ್ದರು. ಇದನ್ನು ನಂಬಿ ದೇಶದ ಯುವಜನತೆ ‘ಮೋದಿ , ಮೋದಿ’ ಎಂದು ನಂಬಿದ್ದರೆ, ಮೋದಿ(Modi)ಯವರು ‘ಪಕೋಡ ಮಾರಲಿ’ ಎಂದು ಯುವಜನರಿಗೆ ಹೇಳಿದ್ದು, ಮೋದಿಯವರ ಬೇಜವಾಬ್ದಾರಿಯನ್ನು ತೋರುತ್ತದೆ.
ರೈತರ ಆದಾಯವನ್ನು ದ್ವಿಗುಣಗೊಳಿಸುವ ಸುಳ್ಳನ್ನು ಹೇಳಿದರು. ಅಗತ್ಯ ವಸ್ತುಗಳ ಬೆಲೆ ಇಳಿಸುತ್ತೇನೆ ಎಂದು ಭರವಸೆ ನೀಡಿದ್ದರು. ಮೋದಿಯವರು ರೂಪಾಯಿ ಮೌಲ್ಯವನ್ನು ಹೆಚ್ಚಿಸುತ್ತೇನೆ ಎಂದು ಸುಳ್ಳು ಹೇಳಿ, ಡಾಲರ್ ಮೌಲ್ಯವನ್ನು (Dollar Rate) ಹೆಚ್ಚಿಸಿದರು. ಇದು ಭಾರತದ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿದೆ. ಅವರು ಎಲ್ಲ ಸುಳ್ಳು ಭರವಸೆಗಳನ್ನು ನೀಡಿ, ಮೋದಿಯವರು ಕಳೆದ 10 ವರ್ಷಗಳಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. 2014 ಹಾಗೂ 2019 ರಲ್ಲಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಮೋದಿ, ಈಗ ಜನರಿಗೆ ಮಂಗಳಸೂತ್ರ , ಮಹಿಳೆ ರಕ್ಷಣೆ ಬಗ್ಗೆ ಮಾತಾಡಿ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಿದ್ಧರಾಮಯ್ಯ (Siddaramaiah) ವಾಗ್ಧಾಳಿ ನಡೆಸಿದ್ದಾರೆ.