ತಿಂಗಳುಗಳ ಬಳಿಕ ಸಾರಿಗೆ ಬಸ್ ಸಂಚಾರ ಆರಂಭ: ಮೈಸೂರು ಹೊರತುಪಡಿಸಿ ಎಲ್ಲಾ ಜಿಲ್ಲೆಗಳಿಗೆ ಇಂದಿನಿಂದ ಬಸ್ ಸಂಚಾರ ಆರಂಭ

ಬೆಂಗಳೂರು,ಜೂ.21: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾದ ಬೆನ್ನಲ್ಲೇ ರಾಜ್ಯದ 16 ಜಿಲ್ಲೆಗಳಲ್ಲಿ ಅನ್‌ಲಾಕ್ ಪ್ರಕ್ರಿಯೆ ಆರಂಭಗೊಂಡಿದ್ದು, ಈ ಹಿನ್ನೆಲೆಯಲ್ಲಿ KSRTC ವತಿಯಿಂದ ಹೊಸ ಮಾರ್ಗ ಸೂಚಿ ಬಿಡುಗಡೆ ಮಾಡಲಾಗಿದೆ. ಅದರಂತೆ ಮೈಸೂರು ಹೊರತುಪಡಿಸಿ ಎಲ್ಲೆಡೆ ಇಂದಿನಿಂದ ಬಸ್​ ಸಂಚಾರ ಆರಂಭಗೊಳ್ಳಲಿದೆ.

ರಾಜ್ಯದಲ್ಲಿ ತಲ್ಲಣ ಮೂಡಿಸಿದ್ದ ಕೊರೊನಾ ಆರ್ಭಟ ತಣ್ಣಗಾದ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಲಾಕ್ ಡೌನ್ ನಿಯಮಗಳನ್ನು ಸಡಿಲಗೊಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಂತ ಸಾರಿಗೆ ಬಸ್ ಸಂಚಾರ ಆರಂಭಿಸಲು ಕೆಎಸ್ಆರ್ಟಿಸಿ ನಿರ್ಧರಿಸಿದೆ. ಹೀಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಬಸ್​ ಸಂಚಾರ ಆರಂಭವಾಗಲಿದ್ದು, ಮೊದಲ ಹಂತದಲ್ಲಿ 3 ಸಾವಿರ ಬಸ್​ ಕಾರ್ಯಾಚರಣೆ ಆರಂಭಿಸಲಿವೆ.

ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿಧಿಸಿದ್ದ ಲಾಕ್ ಡೌನ್ ಮಾರ್ಗಸೂಚಿಯನ್ನು ಮೈಸೂರು ಹೊರತುಪಡಿಸಿ ಇತರೆ ಜಿಲ್ಲೆಗಳಲ್ಲಿ ಸಡಿಲಗೊಳಿಸಿ ಆದೇಶಿಸಲಾಗಿದೆ. ಆದ್ದರಿಂದ ಶೇ. 50 ಆಸನ ಸಾಮರ್ಥ್ಯದಲ್ಲಿ ಬಸ್ ಸಂಚಾರ ಆರಂಭಿಸಲು ನಿರ್ಧರಿಸಲಾಗಿದೆ. ಮೈಸೂರು ಹೊರತುಪಡಿಸಿ ಇತರೆ ಜಿಲ್ಲೆಗಳಲ್ಲಿ ಪ್ರಯಾಣಿಕರ ಜನದಟ್ಟಣೆ, ಅವಶ್ಯಕತೆಗೆ ಅನುಗುಣವಾಗಿ 3000 ಬಸ್ ಸಂಚಾರ ಆರಂಭಿಸಲಾಗುತ್ತಿದೆ. ಆದರೆ ಅಂತಾರಾಜ್ಯ ಸಾರಿಗೆ ಸಂಚಾರದ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧರಿಸುವುದಾಗಿ ಕೆಎಸ್​ಆರ್​ಟಿಸಿಯಿಂದ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಲಾಗಿದೆ.

Exit mobile version