ಮೌಂಟ್ ಅನ್ನಪೂರ್ಣ ಏರಿದ ದೇಶದ ಮೊದಲ ಮಹಿಳೆ

ವಿಶ್ವದ ಹತ್ತನೇ ಅತಿ ಎತ್ತರದ ಪರ್ವತ ಶಿಖರ ಮೌಂಟ್ ಅನ್ನಪೂರ್ಣವನ್ನು ಪಶ್ಚಿಮ ಮಹಾರಾಷ್ಟ್ರದ ಪ್ರಿಯಾಂಕ ಮೊಹಿತೆ ಎಂಬಾಕೆ ಏರಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. 28 ವರ್ಷದ ಪ್ರಿಯಾಂಕ ಎಂಬವರು ಮೌಂಟ್ ಅನ್ನಪೂರ್ಣ ಶಿಖರವನ್ನು ಏರಿರುವ ಬಗ್ಗೆ, ಸಹೋದ್ಯೋಗಿ ಮತ್ತು ಬಯೊಕಾನ್ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಮಾಜುಮ್​ದಾರ್ ಶಾ ಎಂಬವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

ನಮ್ಮ ಸಹೋದ್ಯೋಗಿ ಪ್ರಿಯಾಂಕ ಮೊಹಿತೆ, 8091 ಮೀಟರ್ ಎತ್ತರದ ಹಾಗೂ ವಿಶ್ವದ ಹತ್ತನೇ ಅತಿ ಎತ್ತರದ ಶಿಖರವಾಗಿರುವ ಮೌಂಟ್ ಅನ್ನಪೂರ್ಣ ಪರ್ವತವನ್ನು ಏರಿದ್ದಾರೆ. 2021 ಏಪ್ರಿಲ್ 16ರಂದು ಮಧ್ಯಾಹ್ನ 1.30ರ ವೇಳೆಗೆ ಶಿಖರದ ತುದಿ ತಲುಪಿದ್ದಾರೆ. ಪ್ರಿಯಾಂಕ, ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆಯಾಗಿದ್ದಾರೆ. ನಾವು ಈ ಬಗ್ಗೆ ಹೆಮ್ಮೆ ಪಡುತ್ತೇವೆ ಎಂದು ಕಿರಣ್ ಮಜುಮ್​ದಾರ್ ಶಾ ಟ್ವೀಟ್ ಮಾಡಿದ್ದಾರೆ.

ಪರ್ವತಾರೋಹಿ ಪ್ರಿಯಾಂಕ ಮೊಹಿತೆ 2013ರಲ್ಲಿ 8,849 ಮೀಟರ್ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ್ದರು. 2018ರಲ್ಲಿ 8,516 ಮೀಟರ್ ಎತ್ತರದ ಮೌಂಟ್ ಲೋಟ್ಸೆ ಶಿಖರವನ್ನು, 8,485 ಮೀಟರ್ ಎತ್ತರದ ಮೌಂಟ್ ಮಕಲು ಶಿಖರವನ್ನು ಹಾಗೂ 2016ರಲ್ಲಿ 5,895 ಮೀಟರ್ ಎತ್ತರದ ಮೌಂಟ್ ಕಿಲಿಮಂಜಾರೋ ಪರ್ವತವನ್ನು ಏರಿದ್ದರು.

ತಮ್ಮ ಬಾಲ್ಯದಿಂದಲೂ ಪರ್ವತಾರೋಹಣದ ಬಗ್ಗೆ ಆಸಕ್ತಿ ಹೊಂದಿರುವ ಪ್ರಿಯಾಂಕ, ಮಹಾರಾಷ್ಟ್ರದ ಸಹ್ಯಾದ್ರಿ ಶ್ರೇಣಿ ಪರ್ವತಗಳನ್ನು ಹತ್ತುತ್ತಾ ಪರ್ವತಾರೋಹಣ ಅಭ್ಯಾಸ ಮಾಡಿಕೊಂಡರು. ಹಿಮಾಲಯದ ಗರ್​ವಾಲ್ ವಿಭಾಗದ ಶ್ರೇಣಿಯನ್ನು ಆರೋಹಣ ಮಾಡುವ ಮೂಲಕ 2012ರಲ್ಲಿ ಅಧಿಕೃತವಾಗಿ ಪರ್ವತ ಶ್ರೇಣಿ ಏರಲು ಆರಂಭಿಸಿದ್ದರು ಎಂದು ಪ್ರಿಯಾಂಕ ಸಹೋದರ ಆಕಾಶ್ ಮೊಹಿತೆ ಪಿಟಿಐಗೆ ತಿಳಿಸಿದ್ದಾರೆ.

Exit mobile version