ನಿಧಾನವಾಗಿ ಮುಂದಕ್ಕೆ ಚಲಿಸುತ್ತಿದೆ ಸೂಯೆಜ್ ಕಾಲುವೆಯಲ್ಲಿ ಸಿಲುಕಿಕೊಂಡಿರುವ ಹಡಗು

ಕೈರೋ, ಮಾ. 29: ಈಜಿಪ್ಟ್​ನ ಸೂಯೆಜ್ ಕಾಲುವೆಯಲ್ಲಿ ದಡಕ್ಕೆ ಅಪ್ಪಳಿಸಿ ನಿಂತಿರುವ ದೈತ್ಯ ಸರಕು ಸಾಗಣೆ ಹಡಗು ಎವರ್​ ಗಿವನ್ ಮುಂದೆ ಸಾಗುತ್ತಿದೆ ಎಂದು ಮೂಲಗಳು ವರದಿ ಮಾಡಿವೆ. ಕಳೆದ ಒಂದು ವಾರದಿಂದ ಸುಯೆಜ್ ಕಾಲುವೆಯಲ್ಲಿ ಸಿಲುಕಿಕೊಂಡಿರುವ ಹಡಗನ್ನು ರಕ್ಷಣಾ ತಂಡಗಳು ಮುಂದೆ ಚಲಿಸುವಂತೆ ಮಾಡಿದ್ದಾರೆ ಎಂದು ಕಡಲ ಸೇವಾ ಪೂರೈಕೆದಾರ ಇಂಚ್ ಕೇಪ್ ಹೇಳಿದೆ. ಎರಡೂ ದಡಕ್ಕೆ ತಾಗಿಕೊಂಡು ನಿಂತಿರುವ ಎವರ್​ ಗಿವನ್ ಹಡಗನ್ನು ಕದಲಿಸಿ ಅದರ ಮಾರ್ಗದಲ್ಲಿ ಸಾಗುವಂತೆ ಮಾಡಿ, ಇತರ ಹಡಗುಗಳ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಪ್ರಯತ್ನ ನಡೆಯುತ್ತಿದೆ. ಆದರೆ ಯಾವಾಗ ಸಂಚಾರಕ್ಕೆ ತೆರೆದುಕೊಳ್ಳಲಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.

ಹಡಗಿನ ಅಡಿಯಲ್ಲಿರುವ ಮರಳು ತೆರವುಗೊಳಿಸಲು ಡ್ರೆಡ್ಜರ್​ಗಳು (ಹೂಳೆತ್ತುವ ಯಂತ್ರಗಳು) ಯತ್ನಿಸುತ್ತಿವೆ. ತಜ್ಞರ ನೆರವು ಪಡೆದುಕೊಂದು ಎವರ್ ಗಿವನ್ ಸುತ್ತ ಇರುವ 27,000 ಕ್ಯುಬಿಕ್ ಮೀಟರ್ ಮರಳು ಹಾಗೂ ಮಣ್ಣು ತೆಗೆಯಲಾಗಿದೆ. ಸರಕುಸಾಗಣೆ ಹಡಗಿನಲ್ಲಿರುವ ಕಂಟೇನರ್​ಗಳನ್ನು ಕೆಳಗಿಳಿಸುವ ಪ್ರಯತ್ನಕ್ಕೂ ಪ್ರಾಧಿಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹಡಗಿನಿಂದ ತುರ್ತಾಗಿ ಕಂಟೇನರ್​ಗಳನ್ನು ಕೆಳಗಿಳಿಸಲು ಬೇಕಾದ ವಿಶೇಷ ಉಪಕರಣಗಳ ಖರೀದಿಗೂ ಈಜಿಪ್ಟ್ ಅಧ್ಯಕ್ಷರು ಒಪ್ಪಿಗೆ ನೀಡಿದ್ದಾರೆ.

ಇತ್ತ ಈ ಘಟನೆ ನಡೆದ ನಂತರದಿಂದ ಸೂಯೆಜ್ ಬಳಿ 200ಕ್ಕೂ ಹೆಚ್ಚು ಹಡಗುಗಳು ಲಂಗರು ಹಾಕಿವೆ.. ಈಗಾಗಲೇ ಶಿಪ್ಪಿಂಗ್ ಕಂಪನಿಗಳು ದಕ್ಷಿಣ ಆಫ್ರಿಕಾದ ಕೇಪ್ ಆಫ್ ಗುಡ್ ಹೋಪ್ ಮೂಲಕ ಸಾಗಾಟ ಆರಂಭಿಸಿವೆ. ಆದರೂ ಈ ಮಾರ್ಗವು ಏಷ್ಯಾ ಹಾಗೂ ಯುರೋಪ್ ಮಧ್ಯದ ಪ್ರಯಾಣಕ್ಕೆ ಸರಾಸರಿಯಾಗಿ ಕನಿಷ್ಠ 7 ದಿನಗಳನ್ನು ತೆಗೆದುಕೊಳ್ಳುತ್ತದೆ.

Exit mobile version