ಮುಂಬೈನಲ್ಲಿ ಆತ್ಮಹತ್ಯೆಗೆ ಮುಂದಾದ ಯುವಕನನ್ನು ರಕ್ಷಿಸಿದ ಐರ್ಲೆಂಡ್‌ ವ್ಯಕ್ತಿ

ಮುಂಬೈ, ಜ. 5: ಮುಂಬೈನ ದುಲೆ ಎಂಬಲ್ಲಿ 23 ವರ್ಷದ ವ್ಯಕ್ತಿಯೊಬ್ಬ ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಪ್ರಸ್ತುತ ಕಾಲದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರು ಫೇಸ್​ಬುಕ್​ ಲೈವ್​ ಬರುವುದು ಸಹಜ ಪ್ರಕ್ರಿಯೆಯಾಗಿ ಬಿಟ್ಟಿದೆ. ಅದೇ ರೀತಿಯಲ್ಲಿ ಈ ಯುವಕ ಕೂಡ ಫೇಸ್​ಬುಕ್​ ಲೈವ್​ಗೆ ಬಂದಿದ್ದಾನೆ. ಅಳುತ್ತಲೇ ತನಗಾಗಿರುವ ಕಷ್ಟ, ನಷ್ಟ, ತನ್ನ ನೋವು, ತಾನೇಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಕಾರಣಗಳನ್ನು ಹೇಳಿದ್ದಾನೆ.

ಇಷ್ಟೆಲ್ಲಾ ಹೇಳುತ್ತಲೇ ಕುತ್ತಿಗೆಯನ್ನು ರೇಸರ್​ನಿಂದ ಕತ್ತರಿಸಿಕೊಂಡು ಬಿಟ್ಟಿದ್ದಾನೆ. ಎಲ್ಲೋ ಕುಳಿತು ಈ ಯುವಕನ ಕಷ್ಟ ಕೇಳುತ್ತಿದ್ದವರು ಆತನ ಕಥೆ ಮುಗಿಯಿತು ಎಂದೇ ಭಾವಿಸಿ ಮರುಕಪಡುತ್ತಿದ್ದರು. ಆದರೆ ಅಲ್ಲಿ ಆಗಿದ್ದನ್ನು ಕೇಳಿದರೆ ದಂಗಾಗುತ್ತೀರಾ. ಇನ್ನೇನು ಅವನ ಉಸಿರು ನಿಂತು ಹೋಗುತ್ತದೆ ಎನ್ನುವಾಗಲೇ  ಈ ಲೈವ್ ವೀಡಿಯೋವನ್ನು  ಐರ್ಲ್ಯಾಂಡ್​ನಲ್ಲಿನ ಫೇಸ್​ಬುಕ್ ಮುಖ್ಯ ಕಚೇರಿಯ ಸಿಬ್ಬಂದಿ ನೋಡಿದ್ದಾರೆ. ಈ ಯುವಕನನ್ನು ಕಾಪಾಡಲು ಪ್ರಯತ್ನಿಸಿದ ಸಿಬ್ಬಂದಿ ಕೂಡಲೇ ಮುಂಬೈ ಸೈಬರ್ ಡಿಸಿಪಿ ರಶ್ಮಿ ಕರಂಡಿಕರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ. ಮುಂಬೈನ ವ್ಯಕ್ತಿಯೊಬ್ಬ ಫೇಸ್​ಬುಕ್​ ಲೈವ್​ಗೆ ಬಂದು ಆತ್ಮಹತ್ಯೆಗೆ ಮುಂದಾಗಲು ಹೊರಟಿದ್ದಾನೆ. ಆತನನ್ನು ಪತ್ತೆ ಹಚ್ಚಿ ರಕ್ಷಿಸುವಂತೆ, ಆತನ ಪೋಟೋ ಮತ್ತು ಲೈವ್ ವೀಡಿಯೋ ಲಿಂಕ್ ಶೇರ್ ಮಾಡಿದ್ದಾರೆ.

ತಕ್ಷಣವೇ ಮುಂಬೈನ ಸೈಬರ್ ಪೊಲೀಸರು, ಈ ಯುವಕನ ಲೊಕೇಷನ್ ಪತ್ತೆ ಹಚ್ಚಿದ್ದಾರೆ. ದುಲೆ ಪ್ರಾಂತ್ಯದಲ್ಲಿ ಆತನ ಮನೆ ಇರೋದನ್ನು ಪತ್ತೆ ಹಚ್ಚಿದ ಅವರು, ಹತ್ತೇ ನಿಮಿಷದಲ್ಲಿ ಅಲ್ಲಿಗೆ ತೆರಳಿದ್ದಾರೆ. ಅಷ್ಟರಲ್ಲೇ ಯುವಕ ಕತ್ತು ಕುಯ್ದುಕೊಂಡು, ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ. ಆದರೆ ಉಸಿರಾಡುತ್ತಿದ್ದ ಆತನನ್ನು ಕೂಡಲೇ ಅಂಬ್ಯುಲೆನ್ಸ್​ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಸದ್ಯ ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟಿನಲ್ಲಿ, ಫೇಸ್​ಬುಕ್​ ಲೈವ್​ ಬಂದುದಕ್ಕೆ ಯುವಕನ ಪ್ರಾಣ ಉಳಿದಿದೆ. 10-15 ನಿಮಿಷದಲ್ಲಿಯೇ ದೂರದ ದೇಶದಿಂದ ಮುಂಬೈ ನಿವಾಸಿಯೊಬ್ಬನ ಪ್ರಾಣ ಉಳಿದಿರುವುದು ಆಶ್ಚರ್ಯವೇ ಸರಿ.

Exit mobile version