`ಮೃತ್ಯುಂಜಯ’ ಟೈಟಲ್ ಲಾಂಚ್

ನಾಯಕ ಮೃತ್ಯುವನ್ನು ಜಯಿಸುವ ಕತೆಯನ್ನು ಹೊಂದಿರುವ ಚಿತ್ರ ಇದು. ನಾನು ಸೈಕಿಯಾಟ್ರಿಸ್ಟ್ ಪಾತ್ರ ಮಾಡಿದ್ದೇನೆ. ಆತ್ಮಹತ್ಯೆಗೆ ಪ್ರಯತ್ನಿಸುವ ನಾಯಕನನ್ನು ಹೇಗೆ ಬದಲಾಯಿಸುತ್ತೇನೆ ಎನ್ನುವುದು ನನ್ನ ಪಾತ್ರ. ಲಾಕ್ಡೌನ್ ಬಳಿಕ ನಾನು ನಟಿಸಿದ ಮೊದಲ ಚಿತ್ರ ಇದು. ಹೊಸಬರ ತಂಡವಾದರೂ ನಿರ್ದೇಶಕ ಸಜ್ಜನ್ ಅವರ ಸಂರಕ್ಷಣೆಯೊಂದಿಗೆ 192 ಗಂಟೆಯಲ್ಲಿ ಪೂರ್ತಿ ಮಾಡಿದ ಚಿತ್ರ. ಬೇಗ ಮಾಡಿದ್ದಾರೆ ಎನ್ನುವ ಕಾರಣಕ್ಕೆ ಗುಣಮಟ್ಟದಲ್ಲಿ ಯಾವುದೇ ಕೊರೆತಯಾಗಿಲ್ಲ ಎಂದಿದ್ದಾರೆ ಸುಮನ್ ನಗರ್ಕರ್. ಅವರು `ಮೃತ್ಯುಂಜಯ’ ಚಿತ್ರದ ಟೈಟಲ್ ಲಾಂಚ್ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಈ ಹಿಂದೆ `ಮಂತ್ರಂ’ ಎನ್ನುವ ಚಿತ್ರವನ್ನು ನಿರ್ದೇಶಿಸಿದ್ದ ಎಸ್ ಎಸ್ ಸಜ್ಜನ್ ಅವರು ನಿರ್ದೇಶಿಸಿರುವ ಸಿನಿಮಾ ಮೃತ್ಯುಂಜಯ. “ನಿರ್ಮಾಪಕಿ ಶೈಲಜಾ ಪ್ರಕಾಶ್ ಅವರ ಜೊತೆಗೆ ಈ ಹಿಂದೆ ಕಿರುಚಿತ್ರವೊಂದನ್ನು ಮಾಡಿದ್ದೆ. ಇದೀಗ ಕಮರ್ಷಿಯಲ್ ಮೂವಿಯೊಂದರ ಮೂಲಕ ಮತ್ತೆ ಜೊತೆಯಾಗಿದ್ದು ಖುಷಿಯಿದೆ” ಎಂದು ಸಜ್ಜನ್ ಹೇಳಿದರು. ಚಿತ್ರಕ್ಕೆ ಆನಂದ್ ರಾಜ್ ವಿಕ್ರಮ್ ಅವರ ಸಂಗೀತ ನಿರ್ದೇಶನ ಇದೆ. ಕತೆಯಲ್ಲಿ ಸಸ್ಪೆನ್ಸ್‌ ಥ್ರಿಲ್ಲರ್ ಇದೆ. ರುದ್ರಮ್ಮದೇವಿ ಚಿತ್ರದಲ್ಲಿ ಕ್ಯಾಮೆರಾ ವಿಭಾಗದಲ್ಲಿ ಕೆಲಸ ಮಾಡಿದ್ದ ದೇವೇಂದ್ರ ರೆಡ್ಡಿಯವರು ಈ ಚಿತ್ರದ ಛಾಯಾಗ್ರಹಣ ನಿರ್ವಹಿಸಿದ್ದಾರೆ ಎಂದು ಅವರು ತಿಳಿಸಿದರು. ಚಿತ್ರದ ನಾಯಕ ಹಿತೇಶ್ ಮಾತನಾಡಿ “ಬೇಸಿಕಲಿ ನಾನು ಡಾನ್ಸರ್. ಹಾಗೆ ವೃತ್ತಿ ಬದುಕು ಶುರು ಮಾಡಿದ ನಾನು ಸಜ್ಜನ್ ಅವರ ಮೂಲಕ ಸಿನಿಮಾ ನಾಯಕನಾಗಿದ್ದೇನೆ. ಡಾನ್ಸರ್ ಆಗಿದ್ದರೂ ಕತೆಯಲ್ಲಿ ನೃತ್ಯಕ್ಕೆ ಅವಕಾಶ ಇಲ್ಲ. ಆ ಮಟ್ಟಿಗೆ ನಿರ್ದೇಶಕರು ಕತೆಗೆ ಬದ್ಧವಾಗಿದ್ದಾರೆ. ಅಭಿನಯದ ವಿಚಾರದಲ್ಲಿ ನನಗೆ ನಟಿ ಸುಮನ್ ನಗರ್ಕರ್ ಅವರು ಕೂಡ ಸಲಹೆ ನೀಡಿದ್ದಾರೆ” ಎಂದರು. ನಾಯಕಿ ಶ್ರೇಯಾ ಶೆಟ್ಟಿ “ಇದು ನನ್ನ ಮೊದಲನೇ ಚಿತ್ರ. ಇದರಲ್ಲಿ ನಾನು ಸೈಕಾಲಜಿ ಸ್ಟುಡೆಂಟ್ ಪಾತ್ರ ಮಾಡಿದ್ದೇನೆ. ಸುಮನ್ ನಗರ್ಕರ್ ಶಿಷ್ಯೆ ನಾನು. ನಾಯಕನನ್ನು ಡಿಪ್ರೆಶನಿಂದ ಹೇಗೆ ಹೊರಗೆ ತರಬಹುದು ಎನ್ನುವ ಪ್ರಯತ್ನ ನನ್ನದಾಗಿರುತ್ತದೆ. ಒಳ್ಳೆಯದೊಂದು ಮೆಸೇಜ್ ಚಿತ್ರದಲ್ಲಿದೆ” ಎಂದರು.

ಸಾಮಾಜಿಕ ಜಾಲತಾಣದಿಂದ ಗುರುತಿಸಿಕೊಂಡ ಯುವನಟ ಚೇತನ್ ದುರ್ಗ ಲೈಫ್ ಸೂಪರ್, ಗೌಡ್ರ ಹೋಟೆಲ್, ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಇಲ್ಲಿ ನನಗೆ ಒಂದೊಳ್ಳೆಯ ಪಾತ್ರ ನೀಡಿದ್ದಾರೆ ಎಂದರು. `ಮಜಾ ಭಾರತ’ದ ಕಲಾವಿದ ಶಿವು ಇದು ತಮ್ಮ ಎರಡನೇ ಚಿತ್ರ ಎಂದರು. ನಿರ್ಮಾಪಕಿ ಶೈಲಜಾ ಪ್ರಕಾಶ್ ನಮ್ಮ ಸಂಸ್ಥೆಯಿಂದ ಇದು ಎರಡನೇ ಸಿನಿಮಾ. ಈ ಹಿಂದೆ ಹೈವಾನ್ ಎನ್ನುವ ಚಿತ್ರ ಮಾಡಿದ್ದಾಗಿ ತಿಳಿಸಿದರು. ಯುವನಟ ಯಶಸ್ ಟೈಟಲ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

Exit mobile version