Visit Channel

ಪ್ರಧಾನಿ ಮೋದಿ ಅವರ ಎಂಟ್ರಿ ದಿಢೀರ್ ಮೋಡಿ ; `ಲಕ್ಕಿ’ ನಿವಾಸಿ ನಾಗೇಶ್ ಹೆಗಡೆ!

Narendra Modi

ಪ್ರಧಾನಿ(PrimeMinister) ನರೇಂದ್ರ ಮೋದಿಯವರ(Narendra Modi) 2 ದಿನಗಳ ರಾಜ್ಯ ಪ್ರವಾಸದ ಹಿನ್ನೆಲೆ ರಾಜ್ಯದಲ್ಲಾದ ಕೆಲ ಬದಲಾವಣೆಗಳನ್ನು ಕುರಿತು ನಾಗೇಶ್ ಹೆಗಡೆ ಅವರು ತಮ್ಮ ಸಾಲುಗಳಲ್ಲಿ ಈ ರೀತಿ ಬರೆದುಕೊಂಡಿದ್ದಾರೆ. ಅಭಿವೃದ್ಧಿಯ ಸುನಾಮಿ ಅಪ್ಪಳಿಸಿದಾಗ, ನಿನ್ನೆ ನಮ್ಮ ಮನೆಯ ಸಮೀಪ ಹಠಾತ್ತಾಗಿ ಅಭಿವೃದ್ಧಿಯ ಸುನಾಮಿ ಅಪ್ಪಳಿಸಿತು. ಮೊನ್ನೆಯವರೆಗೆ ನಮ್ಮ ರಸ್ತೆ ಹೆಜ್ಜೆ ಹೆಜ್ಜೆಗೂ ಕಸದ ರಾಶಿಯಿಂದ ತುಂಬಿತ್ತು. ಅದು ಹಠಾತ್ತಾಗಿ ಕ್ಲೀನ್‌ ಆಯಿತು.

Narendra Modi

ಬಿರುಗಾಳಿ ಬಂದು ಎಲ್ಲವನ್ನೂ ಗುಡಿಸಿ ಕಣ್ಮರೆ ಮಾಡಿದ ಹಾಗೆ. ಇದು, ಬೆಂಗಳೂರಿನ ಅಂಚಿನಲ್ಲಿ ವಾಸಿಸುವ ನಾವು ತೋಟಕ್ಕೆ ಹೋಗುತ್ತಿದ್ದ `ಕೊಮ್ಮಘಟ್ಟ ರಸ್ತೆʼಯ ಅದೃಷ್ಟ ಖುಲಾಯಿಸಿದ ಕಥೆ. “ಯಾವುದೋ ಮಿನಿಸ್ಟರ್‌ ಬರ್ತಾರೇನೊ” ಅಂದಳು ಪತ್ನೀಮಣಿ. ನಾವು ತೋಟಕ್ಕೆ ಹೋಗಿ ಎರಡು ಗಂಟೆಗಳ ಬಳಿಕ ಹಿಂದಿರುಗುವಾಗ ನೋಡಿದರೆ ರಸ್ತೆಯ ಇಕ್ಕೆಲಗಳ ಪೊದೆಗಳು ಚಕಚಕ ಟ್ರಿಮ್‌ ಆಗಿದ್ದವು. ಮಿಡತೆ ದಾಳಿ ಮಾಡಿದ ಹಾಗೆ. “ಚೀಫ್‌ ಮಿನಿಸ್ಟರೇ ಬರ್ತಾರೇನೋ” ಅಂದಳು ಇವಳು. ಇಲ್ಲಾಂದರೆ ನಗರದ ಅಂಚಿನಲ್ಲಿ ಇದ್ದಕ್ಕಿದ್ದಂತೆ ಇಂಥ ಸ್ವಚ್ಛತೆಯ ಗರಸಿಡಿಲು ಬಡಿದೀತು ಹೇಗೆ?

ನೋಡ ನೋಡುತ್ತ ಜೆಸಿಬಿ, ಬ್ಯಾಕ್‌ಹೋ, ಬುಲ್‌ಡೋಝರ್‌ ಸಾಲು ಸಾಲಾಗಿ ಬಂದು ಜಲ್ಲಿಕಲ್ಲು, ಸಿಮೆಂಟು, ಟಾರು, ಎಲ್ಲವನ್ನೂ ಸುರಿದು ಸಾರಿಸಿ ಹೋದವು. ಅಲ್ಲಿನ ಪೊದೆಗಳ ನಡುವೆ ಫುಟ್‌ ಪಾತ್‌ ಇತ್ತೆಂಬುದು ಗೊತ್ತೇ ಇರಲಿಲ್ಲ. ಅವೆಲ್ಲ ಚೊಕ್ಕಟಗೊಂಡು ಉದ್ದಕ್ಕೂ ಕೆಂಪು ಮಣ್ಣಿನ ಹಾಸು ಬಂತು. ಮುರಿದು ಬಿದ್ದಿದ್ದ ಸೂಚನ ಫಲಕಗಳು ಮೈಮುರಿದು ಎದ್ದು ನಿಂತವು. ಉಜ್ಜಿ ಪಳಪಳ ಆದವು. ಅಲ್ಲಾದೀನನ ದೀಪವನ್ನು ಯಾರೋ ಉಜ್ಜಿದ ಹಾಗೆ. ಮಧ್ಯಾಹ್ನ ನೋಡಿದರೆ ಸಮಸ್ತ ಬಗೆಯ ಸಮವಸ್ತ್ರಗಳ ಸೈನ್ಯವೇ ಬಂದಿಳಿಯಿತು. ಡಬಲ್‌ ರಸ್ತೆಯ ನಾಲ್ಕೂ ಅಂಚುಗಳಿಗೆ ಸಾಲುಗಲ್ಲುಗಳು ಬಿಳಿ ಹಳದಿ, ಬಿಳಿ ಹಳದಿ ಬಣ್ಣ ಬಳಿದುಕೊಂಡು ನಿಂತವು.

PM

ರಸ್ತೆಯಂತೂ 24 ಗಂಟೆಗಳಲ್ಲಿ ಕಪ್ಪು ಮಿರಿಮಿರಿ ಮಿಂಚ ತೊಡಗಿತು. ರಸ್ತೆ ಬದಿಯ ದೀಪದ ಕಂಬಗಳೆಲ್ಲ ಮೇಕಪ್‌ ಮಾಡಿಕೊಂಡು ನಿಂತವು. “ರಾಷ್ಟ್ರಪತಿಯೇ ಬರ್ತಾರೇನೋ” ಅಂದಳು ಇವಳು. ಪಕ್ಕದ ಮೈದಾನದಲ್ಲಿ ತನ್ನ ಪಾಡಿಗೆ ತಾನಿದ್ದ ಕ್ರಿಕೆಟ್‌ ಪಿಚ್ಚು, ಲಂಬಾಣಿ ಟೆಂಟು, ಕಬ್ಬಿನ ರಸ ಮಾರುವ ಗಾಣದಂಗಡಿ ಎಲ್ಲವೂ ಸುಂಟರಗಾಳಿಗೆ ಸಿಕ್ಕ ಹಾಗೆ ಮಾಯವಾದವು. ಅಲ್ಲೊಂದು ಒಂದೆರಡೆಕರೆ ವಿಸ್ತೀರ್ಣದ ವಿಶಾಲ ಬೆಳ್ಳನ್ನ ಟೆಂಟ್‌ ಗೋಚರಿಸಿತು. ಅದರ ಪಕ್ಕದಲ್ಲೇ ಇನ್ನೊಂದು. ಅದರ ಪಕ್ಕದಲ್ಲಿ ಮತ್ತೊಂದು. ಮರುಭೂಮಿಯಂತಿದ್ದ ನೆಲ ದುಬೈ ಆಯಿತು. “ಪ್ರೈಮ್‌ ಮಿನಿಸ್ಟರೇ ಬರ್ತಾರೆ” ಅಂದೆ.


ಹೇಳಬೇಕಾದ್ದೇ ಇರಲಿಲ್ಲ. ಕಣ್ಣೆದುರಿಗೇ ಪ್ರತಿ ಕಂಬಕ್ಕೂ ಮೋದಿ. ಪ್ರತಿ ಗೂಟಕ್ಕೂ ಭಾಜಪಾ ಬಾವುಟ ಬಂತು. ದಿಗಂತದ ಸೂರ್ಯ ಕಣ್ಣೆದುರೇ ಬಂದಂತೆ ವೃತ್ತಾಕಾರದ ಕೆಂಪು ಹಳದಿ ಕಲರ್‌ ಕಲರ್‌ ಚಕ್ರಗಳು. ದೇಶದ ತುಂಬೆಲ್ಲ ಅಗ್ನಿಪಥದ ಕೆಂಪು ಹಳದಿ ಜ್ವಾಲೆ ಭುಗಿಲೆದ್ದಿದ್ದರೆ, ಇಲ್ಲಿ ಅದೇ ಕಲರ್‌ ಆದರೆ ಎಲ್ಲವೂ ಕೂಲ್‌ ಕೂಲ್‌. ಈಗ ಮಾರುಮಾರಿಗೆ ಪೊಲೀಸರು. ಪೊಲೀಸರ ಮೇಲಧಿಕಾರಿಗಳು, ಅವರ ಮೇಲಧಿಕಾರಿಗಳು. ಅವರ ಮೇಲಧಿಕಾರಿಗಳು. ಫೋಟೊ ತೆಗೆಯಲಿಕ್ಕೂ ನಿರ್ಬಂಧ. (ಇಲ್ಲಿನ ಮೊದಲ ಫೋಟೊ ಮಾತ್ರ ನನ್ನವಳು ತೆಗೆದಿದ್ದು. “ನಮಗೆ ಮೋದಿಯವರನ್ನು ಪ್ರತ್ಯಕ್ಷ ಕಾಣುವ ಯೋಗ ಬಂತು” ಎಂದಳು ಪತ್ನಿ ರೇಖಾ. ಯೋಗ ನಮ್ಮದಲ್ಲ, ‘ಯೋಗ’ ಮಾಡಲು ಬರುವ ಗಣ್ಯರದ್ದು ಎಂದೆ. ಪಕ್ಕದಲ್ಲೇ ಹೆಲಿಪ್ಯಾಡ್‌ ಸಜ್ಜಾಗುತ್ತಿತ್ತು.

India


“ಅವರು ಇಲ್ಲೇ ಬಂದಿಳೀತಾರೇನೊ. ಮತ್ಯಾಕೆ ರಸ್ತೆಯೆಲ್ಲ ಹೀಗೆ ಮ್ಯಾಜಿಕ್‌ ಕಾರ್ಪೆಟ್‌ ಆಗುತ್ತಿದೆ?” ಕೇಳಿದಳು ರೇಖಾ. “ಸಿಂಪಲ್‌ ಲಾಜಿಕ್‌. ಅವರು ರಸ್ತೆಯಲ್ಲೇ ಬರ್ತಾರೆ. ಆ ಮೇಲೆ ಹೆಲಿಕಾಪ್ಟರ್‌ ಏರಿ ಹೋಗಬಹುದು” ಎಂದೆ. ಅವರ ಹಿಂದೆಯೇ ಈ ಮ್ಯಾಜಿಕ್‌ ಕಾರ್ಪೆಟ್‌ ಕೂಡ ಹಾರಿಹೋಗುತ್ತದೇನೊ ಎಂದಳು ಇವಳು. ʼನಾವು ನೋಡೋಕೆ ನಾಳೆ ಬರೋಣವಾ?ʼ ಕೇಳಿದಳು. ಇಂದಿನ ಸಂಜೆಯ ವಾರ್ತೆಯ ಪ್ರಕಾರ ಕೆಂಗೇರಿಯ ನಮ್ಮ ನಿವಾಸದ ಪೂರ್ವದ ರಸ್ತೆ ನಾಳೆ ಬಂದ್‌. ದಕ್ಷಿಣದ ರಸ್ತೆ ಬಂದ್‌. ಪಶ್ಚಿಮದ ರಸ್ತೆ ಬಂದ್‌. ಇಪ್ಪತ್ತು ಕಿಲೊಮೀಟರ್‌ ಉದ್ದದ ರಸ್ತೆಯಂಚಿನ ಶಾಲೆಗಳೆಲ್ಲ ಬಂದ್‌.

ಅಷ್ಟುದ್ದಕ್ಕೂ ರಸ್ತೆಗಳು ಮಿರಿಮಿರಿ ಮಿಂಚುವ ಹೊಸ ಡಾಂಬರು ಹಾಕಿಸಿಕೊಂಡು ಫುಟ್‌ಪಾತ್‌ಗಳು ಕೆಮ್ಮಣ್ಣನ್ನು ಹಾಸಿ ಹೊದ್ದಿರಬಹುದು. ಅಭಿವೃದ್ಧಿಯ ಕಣ್ಕಟ್ಟು ಎಂದರೆ ಇದು. ಮೋದಿಯವರು ಕಳೆದ ಎಂಟು ವರ್ಷಗಳಲ್ಲಿ ಎಲ್ಲಿ ಹೋದರೂ ಹೀಗೆ ಥಳಥಳಿಸುವ ಭಾರತವೇ ಅವರೆದುರು ಮೂಡುತ್ತಿದೆಯೇನೊ. ಅದಕ್ಕೂ ಹಿಂದೆ 15 ವರ್ಷ ಗುಜರಾತಿನ ಮುಖ್ಯಮಂತ್ರಿ ಆಗಿದ್ದಾಗಲೂ, ಅಂದರೆ ಒಟ್ಟು ಸುಮಾರು 23 ವರ್ಷಗಳ ಕಾಲ ಅವರು ಹೋದಲ್ಲೆಲ್ಲ ಇದೇ ನಾಟಕೀಯ ಅಭಿವೃದ್ಧಿಯನ್ನೇ ವಂದಿಮಾಗಧರು ಅವರೆದುರು ತೋರಿಸುತ್ತಿರಬೇಕು.

Devolpment

ಪಾಪ, ವಾಜಪೇಯಿಯವರೆದುರೂ ಹೀಗೆ “ಭಾರತ ಥಳಥಳಿಸುತ್ತಿದೆ” ಎಂದು (ಅವರೇ ನಂಬುವಷ್ಟು) ಭರ್ಜರಿ ಪ್ರಚಾರ ಕೊಡಲಾಗಿತ್ತು. ಮೋದಿಯವರೂ ಇನ್ನೇನು, ವಾಸ್ತವ ಭಾರತವನ್ನು ಕಣ್ಣಾರೆ ನೋಡದೇ ಹತ್ತಿರ ಹತ್ತಿರ ಕಾಲು ಶತಮಾನಗಳಾಗಿವೆ. ಮಾಧ್ಯಮಗಳ ಭರಾಟೆ ಹೆಚ್ಚಾದಷ್ಟೂ ಅವರು ಹೆಜ್ಜೆ ಇಟ್ಟಲ್ಲೆಲ್ಲ ಇಂಥ ಅಭಿವೃದ್ಧಿಯ ಮಾಯಾಲೋಕವೇ ಸೃಷ್ಟಿ ಆಗುತ್ತಿದೆಯೇನೊ. ನಾನು ಮೂರು ನಾಲ್ಕು ಪ್ರೈಮ್‌ ಮಿನಿಸ್ಟರ್‌ಗಳನ್ನು ಹತ್ತಿರದಿಂದಲೇ ನೋಡಿದವ. ಖರಗ್‌ಪುರ ಐಐಟಿಯಲ್ಲಿದ್ದಾಗ ಅಲ್ಲಿಗೆ ಸೈನ್ಸ್‌ ಕಾಂಗ್ರೆಸ್‌ ಉದ್ಘಾಟನೆಗೆ ಬಂದ ಶ್ರೀಮತಿ ಇಂದಿರಾಗಾಂಧಿಯವರನ್ನು ಸ್ವಾಗತಿಸುವ ಟೀಮಿನಲ್ಲಿದ್ದೆ.

ಆಗ ಬದುಕು ಸರಳವಾಗಿತ್ತು. ಪಿವಿ ನರಸಿಂಹ ರಾವ್‌ ಜೊತೆಗೆ ಅದ್ಧೂರಿ ವಿಮಾನದಲ್ಲಿ ಯುರೋಪ್‌, ಲ್ಯಾಟಿನ್‌ ಅಮೆರಿಕಗಳ ಸುತ್ತಾಟ ಮುಗಿಸಿದ್ದೆ. ರಾಜೀವ್‌ ಗಾಂಧಿ ಸಾಗುವ ರಸ್ತೆಯಲ್ಲಿ ಪ್ರತಿಭಟನೆಯ ಬಾವುಟ ಹಿಡಿದು ನಿಂತಿದ್ದೆ. ದೇವೇಗೌಡರಂತೂ ನಮ್ಮವರೇ ಆಗಿದ್ದರು. ಆ ಎಲ್ಲರನ್ನೂ ಬಿಟ್ಟು ಈಗ ನಾನು ಮೋದಿಯವರಿಗೆ ಜೈ ಎನ್ನಬೇಕಾಗಿದೆ. ಅವರಿಂದಾಗಿ ನನ್ನ ತೋಟದ ಹಾದಿ ಸುಗಮವಾಗಿದೆ. ಈ ಹಾದಿ ಹೇಗಿದೆ ಎಂದರೆ, ನಮ್ಮ ತೋಟಕ್ಕೆ ಹೋಗುವ ಕೊಮ್ಮಘಟ್ಟ ರಸ್ತೆಯ ಕಸ ಎತ್ತಿಸ್ತೀನಿ ಅಂತ ಎಸ್‌ ಟಿ ಸೋಮಶೇಖರ್‌ ಎಂ.ಎಲ್.ಎ ಆಗಿದ್ದಾಗಲಿಂದ ನನಗೆ ಭರವಸೆ ಕೊಡ್ತಾ ಬಂದಿದ್ದರು.

Job seekers

ಆದರೆ ದುರದೃಷ್ಟಕ್ಕೆ ಬೆಂಗಳೂರಿನ ಫ್ಲೆಕ್ಸ್‌ಗಳನ್ನೆಲ್ಲ ಕಿತ್ತು ಹಾಕಬೇಕೆಂದು ಹೈಕೋರ್ಟ್‌ ಆಜ್ಞೆ ಬಂದಿದ್ದೇ ತಡ, ಕಿತ್ತೆಸೆದ ಫಲಕಗಳೆಲ್ಲ ನನ್ನ ರಸ್ತೆಯುದ್ದಕ್ಕೂ ರಾಶಿ ಬಿದ್ದವು. ಅವುಗಳಲ್ಲಿ ಕೆಲವನ್ನು ಎತ್ತಿ ತಂದು ಗೋಲಾಕಾರ ಹೊಲಿದು ನನ್ನ ಪತ್ನಿ ಅವನ್ನು ಹೂಕುಂಡಗಳನ್ನಾಗಿ ಪರಿವರ್ತಿಸಿದ್ದನ್ನು ಇದೇ ಫೇಸ್‌ಬುಕ್‌ ವಾಲ್‌ ಮೇಲೆ ಹಾಕಿದ್ದೆ . ಆಮೇಲೆ ಈ ʼʼಸ್ವಚ್ಛ ಭಾರತ” ಆಂದೋಲನ ಬಂತು ನೋಡಿ! ಬೆಂಗಳೂರಿನ ಈ ಭಾಗದ ಕಸವೆಲ್ಲ ನಾನು ಓಡಾಡುವ ಕೊಮ್ಮಘಟ್ಟ ರಸ್ತೆಯ ಪಕ್ಕಕ್ಕೇ ರಾಶಿ ಬೀಳತೊಡಗಿತು. ನಮ್ಮ MLA ಭಾಜಪ ಸೇರಿ ಮಿನಿಸ್ಟರ್‌ ಆದಮೇಲೆ ಬೆಂಗಳೂರು ಇನ್ನೂ ಚೊಕ್ಕಟ ಆಗಿ, ನನ್ನ ರಸ್ತೆಯ ಪಕ್ಕದ ಕಸ ದುಪ್ಪಟ್ಟಾಯಿತು.


ಈಗ ಮೋದಿಯವರ ಕೃಪೆಯಿಂದಾಗಿ ನನ್ನ ಹಾದಿ ಥಳಥಳಿಸಿದೆ. ಈ ದಿಢೀರ್‌ ಅಭಿವೃದ್ಧಿಯನ್ನು ನೋಡಿ ʼದಿ ಹಿಂದೂʼ ಪತ್ರಿಕೆ “One lucky locality” ಎಂದು ವರ್ಣಿಸಿದೆ. ನಾಡಿದ್ದಿನಿಂದ ಪ್ರಾಯಶಃ ನಾನು ಮತ್ತು ನನ್ನ ಪತ್ನಿ ಈ ಕಲರ್‌ಫುಲ್‌ ಬಂಟಿಂಗ್‌ ಮತ್ತು ಬ್ಯಾನರ್‌ಗಳನ್ನು ರಸ್ತೆ ಬದಿಯಿಂದ ಹೆಕ್ಕುವ ಕೆಲಸವನ್ನು ಆರಂಭಿಸಬೇಕು. ಈ ನಮ್ಮ ʼಲಕಿ ಲೊಕಾಲಿಟಿʼ ನಾಳೆ ಹೇಗಿರುತ್ತೊ?

  • ನಾಗೇಶ್ ಹೆಗಡೆ

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.