ಕಾಂಗ್ರೆಸ್‌ನ 20 ಶಾಸಕರು ಬಿಜೆಪಿಗೆ ಬರಲು ಸಿದ್ದ – ನಳೀನ್ ಕುಮಾರ್

ಬೆಂಗಳೂರು ಸೆ 23 :  ಕಾಂಗ್ರೆಸ್ ಪಕ್ಷದ 20 ಜನ ಶಾಸಕರು ಬಿಜೆಪಿ ಸೇರಲು ಸಿದ್ಧರಾಗಿದ್ದಾರೆ, ಅವರನ್ನು ಬಲೆ ಹಾಕಿ ಸೆಳೆಯುವಂತಹ ಕೆಲಸವನ್ನು ಸಚಿವ ಮುನಿರತ್ನ ಅವರಿಗೆ ನೀಡಲಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೊಸ ಬಾಂಬ್ ಸಿಡಿಸಿದ್ದಾರೆ.

 ಒಬಿಸಿ ಸಮುದಾಯದಿಂದ ಒಬಿಸಿ ಶಾಸಕರು, ಸಂಸದರಿಗೆ ಬಿಜೆಪಿ ಒಬಿಸಿ ಮೋರ್ಚಾ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಕಾಂಗ್ರೆಸ್ ಪಕ್ಷವನ್ನು ಹಿಂದುಳಿದ ವರ್ಗದವರು ದೂರ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ, ಹಿಂದುಳಿದ ವರ್ಗದವರು ಕಾಂಗ್ರೆಸ್‌ನಿಂದ ದೂರವಾಗಿದ್ದಾರೆ. ಅವರಿಗೆ ಹಕ್ಕು ಮತ್ತು ಧ್ವನಿ ನೀಡುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಅಹಿಂದ ಹೋರಾಟ ಅಧಿಕಾರಕ್ಕೆ ಸೀಮಿತವಾಯಿತು. ಬಿಜೆಪಿ ಹಾಗಲ್ಲ. ಈ ವರ್ಗದ ಅಭಿವೃದ್ಧಿಗೆ ನೈಜ ಕಾಳಜಿ ವಹಿಸಿದೆ ಎಂದು ಅವರು ತಿಳಿಸಿದರು,

ಈ ಬಗ್ಗೆ ಬಸವರಾಜ ಬೊಮ್ಮಾಯಿ ಮಾತನಾಡಿ ಹಿಂದುಳಿದ ವರ್ಗದ ಸರ್ವತೋಮುಖ ಅಭಿವೃದ್ದಿಗೆ ಆದ್ಯತೆ ನೀಡಲಾಗುವುದು ಜೊತೆಗೆ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಅವರು ಹೇಳಿದರು.

ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಒಬಿಸಿ ಸಮುದಾಯದ ಸಚಿವರಾಗಿರುವ ಕೆ.ಎಸ್.ಈಶ್ವರಪ್ಪ, ಕೋಟ ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್, ಎಂ.ಟಿ.ಬಿ.ನಾಗರಾಜ್, ಭೈರತಿ ಬಸವರಾಜ್, ಮುನಿರತ್ನ ಮತ್ತು ಆನಂದ್ ಸಿಂಗ್, ಸಂಸದರಾದ ಪಿ.ಸಿ. ಮೋಹನ್ ಮತ್ತು ರಾಜ್ಯಸಭಾ ಸದಸ್ಯರಾದ ನಾರಾಯಣ್ ಅವರಿಗೆ ಹಾಗೂ ಒಬಿಸಿ ಸಮುದಾಯದ ಶಾಸಕರಿಗೆ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಘಟಕದ ವತಿಯಿಂದ ನಗರದ ಮಲ್ಲೇಶ್ವರದ ಚೌಡಯ್ಯ ಮೆಮೋರಿಯಲ್ ಹಾಲ್‍ನಲ್ಲಿ ಗೌರವಾರ್ಪಣೆ ಕಾರ್ಯಕ್ರಮ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಡಾ.ಲಕ್ಷ್ಮಣ್‌, ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್‌ ಸುವರ್ಣ, ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ನೆ.ಲ.ನರೇಂದ್ರಬಾಬು ಭಾಗವಹಿಸಿದ್ದರು.

Exit mobile version